ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಚರ್ಚೆ ಬೆನ್ನಲ್ಲೇ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆಯನ್ನು ಪಕ್ಷ ಎದುರಿಸಲಿದೆ ಎಂದು ಸಿಂಗ್ ತಿಳಿಸಿದ್ದಾರೆ. ಈ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ನಾಯತ್ವದ ಬದಲಾವಣೆಯ ವಿಷಯವನ್ನು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುನ್ನೆಲೆಗೆ ತಂದಿದ್ದಾರೆ. ಅವರಿಗೆ ಚುನಾವಣೆ ಎದುರಿಸಲು ಯಾವುದೇ ವಿಷಯಗಳಿಲ್ಲ. ಕಾಂಗ್ರೆಸ್ ನಾಯಕತ್ವ ಇಲ್ಲದ ಪಕ್ಷ. ಬಿಜೆಪಿ ವಿರುದ್ಧ ಯಾವುದೇ ಅಜೆಂಡಾ ಕೂಡ ಕಾಂಗ್ರೆಸ್ನವರಿಗಿಲ್ಲ. ಹೀಗಾಗಿಯೇ ಸಿಎಂ ಬದಲಾವಣೆ ಎಂಬ ವಿಷಯಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದರು.
ನಾನು ಈಗಾಗಲೇ ಹೇಳಿದ್ದೇನೆ. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಎಸ್ಸಿ, ಎಸ್ಟಿ ಸಮುದಾಯ, ರೈತರು ಮತ್ತು ಯುವಕರಿಗಾಗಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾವು ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. 150 ಸ್ಥಾನ ಗೆಲ್ಲಬೇಕೆಂಬ ಗುರಿ ಹೊಂದಿದ್ದೇವೆ. ಅದನ್ನು ನಾವು ಪೂರೈಸಿಯೇ ತೀರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಲದೇ, ಕಾಂಗ್ರೆಸ್ ಒಡೆದ ಮನೆಯಾಗಿದೆ. ಅವರಿಗೆ ಯಾವುದೇ ನೆಲೆ ಇಲ್ಲ. ಹೀಗಾಗಿ ಗೊಂದಲಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ‘ಟೇಪ್’ ಮತ್ತು ಪಿತೂರಿಗಳನ್ನೇ ನೆಚ್ಚಿಕೊಂಡಿದೆ ಎಂದು ಟೀಕಿಸಿದರು.