May 20, 2026
Wednesday, May 20, 2026
spot_img

ಆಪ್‌ಗೆ ಬಿಗ್ ಶಾಕ್: ಬಿಜೆಪಿಯತ್ತ ರಾಘವ್ ಚಡ್ಡಾ ತಂಡ, ಕೇಜ್ರಿವಾಲ್ ಕೈಬಿಟ್ಟ 7 ಸಂಸದರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಮ್ ಆದ್ಮಿ ಪಕ್ಷದಲ್ಲಿ ಕಳೆದ ಕೆಲವು ದಿನಗಳಿಂದ ಹೊಗೆಯಾಡುತ್ತಿದ್ದ ಅಸಮಾಧಾನ ಇದೀಗ ಸ್ಫೋಟಗೊಂಡಿದೆ. ರಾಜ್ಯಸಭಾ ಉಪನಾಯಕನ ಸ್ಥಾನದಿಂದ ಕೆಳಗಿಳಿಸಿ ಮೂಲೆಗುಂಪು ಮಾಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಘವ್ ಚಡ್ಡಾ, ಇದೀಗ ಅಧಿಕೃತವಾಗಿ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ. ಅವರೊಂದಿಗೆ ಆಪ್‌ನ ಒಟ್ಟು 7 ಸಂಸದರು ಭಾರತೀಯ ಜನತಾ ಪಾರ್ಟಿ ಸೇರಲು ನಿರ್ಧರಿಸಿರುವುದು ಅರವಿಂದ್ ಕೇಜ್ರಿವಾಲ್ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇಂದು ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಘವ್ ಚಡ್ಡಾ, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯರಲ್ಲಿ ಮೂರನೇ ಎರಡರಷ್ಟು (2/3) ಮಂದಿ ಬಿಜೆಪಿಯೊಂದಿಗೆ ವಿಲೀನವಾಗಲು ತೀರ್ಮಾನಿಸಿದ್ದೇವೆ ಎಂದು ಘೋಷಿಸಿದರು. ಚಡ್ಡಾ ಅವರೊಂದಿಗೆ ಪ್ರಮುಖ ನಾಯಕರಾದ ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಕೂಡ ಕೇಜ್ರಿವಾಲ್ ವಿರುದ್ಧ ಬಂಡಾಯವೆದ್ದು ಕಮಲ ಪಾಳಯದತ್ತ ಹೆಜ್ಜೆ ಹಾಕಿದ್ದಾರೆ.

ರಾಜ್ಯಸಭೆಯಲ್ಲಿ ಪಕ್ಷದ ಬಲವನ್ನು ಕುಗ್ಗಿಸಿರುವ ಈ ನಡೆ, ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಕಾನೂನುಬದ್ಧವಾಗಿ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ರಾಜೀನಾಮೆಗೆ ಭಾವನಾತ್ಮಕ ಕಾರಣ ನೀಡಿದ ರಾಘವ್ ಚಡ್ಡಾ, “ನನ್ನ ಯೌವನದ 15 ವರ್ಷಗಳನ್ನು ರಕ್ತ ಮತ್ತು ಬೆವರಿನ ಮೂಲಕ ಈ ಪಕ್ಷ ಕಟ್ಟಲು ನೀಡಿದ್ದೆ. ಆದರೆ ಇಂದು ಆಮ್ ಆದ್ಮಿ ಪಕ್ಷವು ತನ್ನ ಮೂಲ ತತ್ವ ಮತ್ತು ಮೌಲ್ಯಗಳಿಂದ ದೂರ ಸರಿದಿದೆ. ದೇಶದ ಹಿತಾಸಕ್ತಿಗಿಂತ ವೈಯಕ್ತಿಕ ಲಾಭವೇ ಇಲ್ಲಿ ಮುಖ್ಯವಾಗಿದೆ. ನಾನು ತಪ್ಪಾದ ಪಕ್ಷದಲ್ಲಿದ್ದ ಸರಿಯಾದ ವ್ಯಕ್ತಿ ಎಂದು ನನಗೆ ಈಗ ಅರಿವಾಗಿದೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.

2022ರಿಂದ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದ ಈ ಪ್ರಭಾವಿ ನಾಯಕರ ನಿರ್ಗಮನವು ಪಂಜಾಬ್ ಮತ್ತು ದೆಹಲಿ ರಾಜಕಾರಣದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಪಕ್ಷದ ಆಂತರಿಕ ಕಲಹ ಮತ್ತು ಹಿರಿಯ ನಾಯಕರನ್ನು ನಡೆಸಿಕೊಳ್ಳುವ ರೀತಿಯೇ ಈ ಬಂಡಾಯಕ್ಕೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !