ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮುಂಡಿ ಬೆಟ್ಟದಲ್ಲಿ ಜೂನ್ 27ರಿಂದ ತಿಂಗಳ ಕಾಲ ಆಷಾಢ ಶುಕ್ರವಾರ ಆಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ‘ವಿಶೇಷ ದರ್ಶನ’ ಟಿಕೆಟ್ ದರವನ್ನು ರೂ,300 ಹಾಗೂ ರೂ.2 ಸಾವಿರಕ್ಕೆ ನಿಗದಿಪಡಿಸಲಾಗಿದೆ.
ಜೂ.27, ಜು.4, ಮತ್ತು ಜು.18ರಂದು ಆಷಾಢ ಶುಕ್ರವಾರ ಮತ್ತು ವಾರಾಂತ್ಯದ ಶನಿವಾರ ಮತ್ತು ಭಾನುವಾರದಂದು ಲಕ್ಷಾಂತರ ಸಂಖ್ಯೆಯ ಭಕ್ತರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಹನಗಳ ಪಾಸ್ ವ್ಯವಸ್ಥೆ ರದ್ದುಪಡಿಸಲಾಗಿದ್ದು, ಇದರ ಬದಲಿಗೆ ಉಚಿತ ಸಾರಿಗೆ ವ್ಯವಸ್ಥೆ ಎಂದಿನಂತೆಯೇ ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾಹಿತಿ ನೀಡಿದ್ದಾರೆ.
ಬೆಟ್ಟದಲ್ಲಿ ನೂತನ ಮಾದರಿಯ ಸರದಿ ವ್ಯವಸ್ಥೆ ಮಾಡಲಾಗಿದೆ. ಧರ್ಮ ದರ್ಶನದ ಜೊತೆಗೆ ರೂ.300 ಹಾಗೂ ರೂ.2 ಸಾವಿರ ಟಿಕೆಟ್ ಪಡೆದವರಿಗೆ ಎಸಿ ಬಸ್ ನಲ್ಲಿ ಕರೆದೊಯ್ದು ಆದಷ್ಟು ಬೇಗ ದೇವರ ದರ್ಶನ ಮಾಡಿಸುವ ಜೊತೆಗೆ ಅವರಿಗೆ ಚಾಮುಂಡೇಶ್ವರಿಯ ಪ್ರಸಾದ, ತೀರ್ಥ, ನೀರಿನ ಬಾಟಲ್ ಮತ್ತು ಲಡ್ಡು ಚೀಲವನ್ನು ನೀಡಲಾಗುತ್ತದೆ. ಜೊತೆಗೆ ದೇವಾಲಯದ ಆವರಣಕ್ಕೆ ನೇರ ಪ್ರವೇಶವನ್ನು ನೀಡಲಾಗುವುದು ಎಂದು ತಿಳಿಸಿದರು.
ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಉದ್ದೇಶದಿಂದ ಬಟ್ಟೆ ಬ್ಯಾಗ್ ಬಳಸಲಾಗುತ್ತಿದೆ. ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರತಿ ಸಾಲಿನಲ್ಲಿ ಕಾಯುವವರಿಗೆ ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಜನಸಂದಣಿಯನ್ನು ನಿರ್ವಹಿಸಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶುಕ್ರವಾರದಿಂದ ಭಾನುವಾರದವರೆಗೆ ಬೆಟ್ಟದ ಮೇಲೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗುವುದು.