ಹೊಸದಿಗಂತ ವರದಿ, ಮಂಗಳೂರು:
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳೂರಿನ ಕಾವೂರು ಬಿಜಿಎಸ್ ಶಾಲೆಯಲ್ಲಿ ‘ಬಾಲಮುಕುಂದ ಮುದ್ದು ಕೃಷ್ಣ’ ಸ್ಪರ್ಧೆ ಸಂಭ್ರಮದಿಂದ ನಡೆಯಿತು.
ನೂರಾರು ಕಂದಮ್ಮಗಳು ಖುಷಿ ಖುಷಿಯಾಗಿ ಭಾಗವಹಿಸಿದರು. ಮುದ್ದು ಕೃಷ್ಣನ ಕಂಡು ಎಲ್ಲರು ಸಂಭ್ರಮಿಸಿದರು. ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಮಡಿಲಲ್ಲಿ ಪುಟಾಣಿ ಮುದ್ದು ಕೃಷ್ಣರು ನಲಿದಾಡಿದರು.
ಈ ಸಂದರ್ಭ ಮಾತನಾಡಿದ ಬಿಜಿಎಸ್ ಸಂಸ್ಥೆಯ ಕಾರ್ಯದರ್ಶಿ, ಡಾ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು, ಶ್ರೀಕೃಷ್ಣನ ವಿಚಾರಧಾರೆಗಳು ಸಾರ್ವಕಾಲಿಕವಾಗಿ ಜೀವಂತಿಕೆಯನ್ನು ಉಳಿಸಿಕೊಂಡು ಆದರ್ಶ ಮಹಾಮೌಲ್ಯಗಳಾಗಿ ಬೆಳೆದು ಬೆಳಗುತ್ತಿವೆ. ವ್ಯಕ್ತಿಯು ಜೀವನದ ಪರಮ ಗುರಿಯನ್ನು ಹೊಂದಲು ಕೃಷ್ಣನ ಉಪದೇಶಾಮೃತವು ಅಮೃತತ್ವದೆಡೆಗೆ ಕೊಂಡುಹೋಗಲು ಸಹಕಾರಿಯಾಗುತ್ತದೆ. ಆ ನಿಟ್ಟಿನಲ್ಲಿ ಭಗವದ್ಗೀತೆಯನ್ನು ಅರ್ಥಪೂರ್ಣವಾಗಿ ಅರುಹಿಕೊಳ್ಳಬೇಕು ಮಾತ್ರವಲ್ಲ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದ ಬದುಕನ್ನು ನಡೆಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಿಜಿಎಸ್ ಸಂಸ್ಥೆಯ ವ್ಯವಸ್ಥಾಪಕ ಸುಬ್ಬ ಕಾರಡ್ಕ ಮಾತನಾಡಿ, ಪಾಲಕರು ಮಕ್ಕಳಿಗೆ ಮೌಲ್ಯವನ್ನು ಕಲಿಯುವ ಅವಕಾಶವನ್ನು ಕಲ್ಪಿಸಿಕೊಡಬೇಕು. ರಾಮಾಯಣ ಮಹಾಭಾರತದ ಕಥೆಗಳು ತುಂಬಾ ಮೌಲ್ಯಯುತವಾದ ಅಂಶಗಳನ್ನು ಒಳಗೊಂಡಿದ್ದು, ಅದನ್ನು ಮಕ್ಕಳು ಅನುಸರಿಸುವಂತಾಗಬೇಕು ಎಂದರು.
ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಸಿ, ಬಿಜಿಎಸ್ ಎಜ್ಯುಕೇಶನ್‌ನ ಪ್ರಾಂಶುಪಾಲೆ ರೇಷ್ಮಾ ಸಿ. ನಾಯರ್, ಬಿಜಿಎಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾ ಬಂಗೇರ ಉಪಸ್ಥಿತರಿದ್ದರು. ಎನ್. ರಶ್ಮಿ ನಿರೂಪಿಸಿ, ಸರ್ವಮಂಗಲ ಸ್ವಾಗತಿಸಿ, ಆಶಾಲತಾ ವಂದಿಸಿದರು.