ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಂಪಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವಿಜಯ ವಿಠಲ ದೇವಾಲಯದ ತ್ರೀಡಿ ಸಮೀಕ್ಷೆಯನ್ನು ಪ್ರಾರಂಭಿಸಿದೆ.
ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಸ್ಮಾರಕದ ಸಂರಕ್ಷಣೆಗಾಗಿ ಈ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ, ಅಧಿಕಾರಿಗಳು ಸ್ಮಾರಕದ ಸಂಪೂರ್ಣ ಡಿಜಿಟಲ್ ಮಾಹಿತಿಯನ್ನು ಪಡೆಯಲಿದ್ದಾರೆ. ಸಮೀಕ್ಷೆ ನಡೆಸುವಾಗ ಪ್ರವಾಸಿಗರು ಪ್ರದೇಶಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಸ್ಮಾರಕಕ್ಕೆ ಯಾವುದೇ ಹಾನಿಯಾಗಿದೆಯೇ ಎಂದು ತಿಳಿಯಲು ಡ್ರೋನ್‌ಗಳು ಮತ್ತು ಇತರ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಸ್ಮಾರಕದ ಆರೋಗ್ಯವನ್ನು ನಿರ್ಣಯಿಸಲು ಇಂತಹ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿರುವುದು ಇದೇ ಮೊದಲು. 13 ಮತ್ತು 16 ನೇ ಶತಮಾನದ ನಡುವೆ ವಿಜಯನಗರ ಸಾಮ್ರಾಜ್ಯವು ನಿರ್ಮಿಸಿದ ದೇವಾಲಯವನ್ನು ಸಂರಕ್ಷಿಸಲು ಈ ಕೆಲಸ ಮುಖ್ಯವಾಗಿದೆ. ಕಳೆದ ವರ್ಷ 3D ಸಮೀಕ್ಷೆಯ ಪ್ರಯೋಗವನ್ನು ನಡೆಸಲಾಯಿತು.
ತ್ರೀಡಿ ಮಾದರಿಯನ್ನು ರಚಿಸಲು ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಮತ್ತು ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್ ಸಮೀಕ್ಷೆಯನ್ನು ವಿಜಯ ವಿಠಲ ದೇವಾಲಯ ಗೋಪುರದಲ್ಲಿ ಮಾಡಲಾಗುತ್ತಿದೆ.