ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಏಷ್ಯಾಕಪ್ 2025ಕ್ಕೆ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಈ ಟೂರ್ನಿಗಾಗಿ ಹಲವು ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಪ್ರಕಟಿಸುತ್ತಿರುವ ಬೆನ್ನಲ್ಲೇ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೂ ತನ್ನ ಬಲಿಷ್ಠ ತಂಡವನ್ನು ಘೋಷಿಸಿದೆ. ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ ಮತ್ತು ಯುಎಇ ವಿರುದ್ಧ ಆಡುವ ಮೂಲಕ ಅಫ್ಘಾನಿಸ್ತಾನ ಏಷ್ಯಾಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ.
ನಾಯಕತ್ವದ ಜವಾಬ್ದಾರಿ ರಶೀದ್ ಖಾನ್‌ಗೆ
ಲೆಗ್ ಸ್ಪಿನ್ನರ್ ರಶೀದ್ ಖಾನ್ ಈ ಬಾರಿ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ನಾಯಕತ್ವದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳು ಸಮತೋಲನಗೊಂಡಂತೆ ಕಾಣುತ್ತಿವೆ. ಇಬ್ರಾಹಿಂ ಜದ್ರಾನ್ ಮತ್ತು ಸೇದಿಕುಲ್ಲಾ ಅಟಲ್ ಆರಂಭಿಕ ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಉತ್ತಮ ಆರಂಭ ನೀಡುವ ನಿರೀಕ್ಷೆಯಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ ಕೂಡ ತನ್ನ ಆಕ್ರಮಣಕಾರಿ ಶೈಲಿಯಿಂದ ಎದುರಾಳಿ ಬೌಲರ್‌ಗಳಿಗೆ ತಲೆನೋವು ಉಂಟುಮಾಡಬಹುದು.
ಅಫ್ಘಾನಿಸ್ತಾನದ ಮಧ್ಯಮ ಕ್ರಮಾಂಕದಲ್ಲಿ ಅಜ್ಮತುಲ್ಲಾ ಉಮರ್ಜೈ, ಮೊಹಮ್ಮದ್ ನಬಿ ಹಾಗೂ ಗುಲ್ಬದಿನ್ ನೈಬ್ ಇದ್ದಾರೆ. ಇವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುವುದರಿಂದ ತಂಡಕ್ಕೆ ದೊಡ್ಡ ಬಲವಾಗಿದ್ದಾರೆ.
ಬೌಲಿಂಗ್ ದಾಳಿಯಲ್ಲಿ ಸ್ಪಿನ್ನರ್‌ಗಳ ಪ್ರಾಬಲ್ಯ
ಅಫ್ಘಾನಿಸ್ತಾನದ ಪ್ರಮುಖ ಶಕ್ತಿ ಎಂದರೆ ಸ್ಪಿನ್ ದಾಳಿ. ರಶೀದ್ ಖಾನ್ ಜೊತೆಗೇ ನೂರ್ ಅಹ್ಮದ್, ಮುಜೀಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬಿ ಎದುರಾಳಿಗಳಿಗೆ ಸವಾಲು ಎಸೆಯಲಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ಫರೀದ್ ಅಹ್ಮದ್, ನವೀನ್-ಉಲ್-ಹಕ್ ಮತ್ತು ಫಜಲ್ಹಕ್ ಫಾರೂಕಿ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಪಂದ್ಯಾವಳಿ ವೇಳಾಪಟ್ಟಿ
ಅಫ್ಘಾನಿಸ್ತಾನ ತನ್ನ ಏಷ್ಯಾಕಪ್ ಅಭಿಯಾನವನ್ನು ಸೆಪ್ಟೆಂಬರ್ 9 ರಂದು ಹಾಂಗ್ ಕಾಂಗ್ ವಿರುದ್ಧ ಆರಂಭಿಸಲಿದೆ. ನಂತರ ಸೆಪ್ಟೆಂಬರ್ 16 ರಂದು ಬಾಂಗ್ಲಾದೇಶ ಹಾಗೂ ಸೆಪ್ಟೆಂಬರ್ 18 ರಂದು ಶ್ರೀಲಂಕಾ ವಿರುದ್ಧ ಪಂದ್ಯ ಆಡಲಿದೆ.
ಅಫ್ಘಾನಿಸ್ತಾನ ತಂಡ (ಏಷ್ಯಾಕಪ್ 2025): ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಉಮರ್ಜೈ, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಮುಹಮ್ಮದೀನ್ ಅಶ್ರಫ್, ಗಜನ್‌ಫರ್, ನೂರ್ ಅಹ್ಮದ್, ಫರೀದ್ ಮಲಿಕ್, ನವೀನ್-ಉಲ್-ಹಕ್ ಮತ್ತು ಫಜಲ್ಹಕ್ ಫಾರೂಕಿ.
ಮೀಸಲು ಆಟಗಾರರು: ವಫಿವುಲ್ಲಾ ತಾರಖಿಲ್, ನಂಗ್ಯಾಲ್ ಖರೋಟೆ, ಅಬ್ದುಲ್ಲಾ ಅಹ್ಮದ್ಝೈ.