ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಏಷ್ಯಾಕಪ್ 2025ಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತನ್ನ ಅಂತಿಮ ತಂಡವನ್ನು ಘೋಷಿಸಿದೆ. ಲಿಟ್ಟನ್ ದಾಸ್ ನಾಯಕರಾಗಿರುವ ಈ ತಂಡದಲ್ಲಿ ಒಟ್ಟು 16 ಮಂದಿ ಆಟಗಾರರಿಗೆ ಅವಕಾಶ ದೊರಕಿದೆ. ಆದರೆ ಅನುಭವಿಯೂ ಆದ ಆಲ್‌ರೌಂಡರ್ ಮತ್ತು ಏಕದಿನ ನಾಯಕ ಮೆಹದಿ ಹಸನ್ ಮಿರಾಜ್ ಅವರಿಗೆ ಟಿ20 ತಂಡದಲ್ಲಿ ಸ್ಥಾನ ಸಿಗದೆ, ಅವರನ್ನು ಸ್ಟ್ಯಾಂಡ್‌ಬೈ ಆಟಗಾರನಾಗಿ ಮಾತ್ರ ಸೇರಿಸಲಾಗಿದೆ.
ಮೂರು ವರ್ಷಗಳ ಬಳಿಕ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನೂರುಲ್ ಹಸನ್ ಮತ್ತೆ ತಂಡಕ್ಕೆ ಮರಳಿದ್ದಾರೆ. 2022ರ ನವೆಂಬರ್‌ನಲ್ಲಿ ಕೊನೆಯ ಬಾರಿ ಟಿ20 ಆಡಿದ್ದ ಅವರು, 2023ರ ನಂತರ ರಾಷ್ಟ್ರೀಯ ತಂಡದ ಪರ ಯಾವುದೇ ಸ್ವರೂಪದಲ್ಲೂ ಆಡಿರಲಿಲ್ಲ. ಇತ್ತೀಚಿನ ಲೀಗ್‌ಗಳಲ್ಲಿ ಹೆಚ್ಚಿನ ರನ್ ಗಳಿಸದಿದ್ದರೂ ಆಯ್ಕೆದಾರರು ಅವರಿಗೆ ಅವಕಾಶ ನೀಡಿರುವುದು ಅಚ್ಚರಿಯಾಗಿದೆ.
ಇದಲ್ಲದೆ 26 ವರ್ಷದ ಆಲ್‌ರೌಂಡರ್ ಸೈಫ್ ಹಸನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಬಾಂಗ್ಲಾದೇಶ ಪರ ಕೆಲವೇ ಟಿ20 ಮತ್ತು ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ತಂಡದಲ್ಲಿ ಮುಸ್ತಾಫಿಜುರ್ ರಹಮಾನ್, ನಸುಮ್ ಅಹ್ಮದ್ ಮೊದಲಾದ ಪ್ರಮುಖ ಆಟಗಾರರೂ ಇದ್ದಾರೆ.
ಸೆಪ್ಟೆಂಬರ್ 28ರವರೆಗೆ ನಡೆಯುವ ಈ ಟೂರ್ನಮೆಂಟ್‌ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿದ್ದು, ಟಿ20 ಸ್ವರೂಪದಲ್ಲಿ ಸ್ಪರ್ಧೆ ನಡೆಯಲಿದೆ. ಇದಕ್ಕಾಗಿ ಪಾಕಿಸ್ತಾನ ಮತ್ತು ಭಾರತ, ಹಾಂಕಾಂಗ್, ಹಾಗೂ ಅಫ್ಘಾನಿಸ್ಥಾನ ಈಗಾಗಲೇ ತಮ್ಮ ತಂಡಗಳನ್ನು ಪ್ರಕಟಿಸಿದ್ದರೆ, ಇದೀಗ ಬಾಂಗ್ಲಾದೇಶವೂ ತನ್ನ ಸಿದ್ಧತೆಯನ್ನು ಪೂರ್ಣಗೊಳಿಸಿದೆ.
ಬಾಂಗ್ಲಾದೇಶ್ ತಂಡ: ಲಿಟ್ಟನ್ ದಾಸ್ (ನಾಯಕ), ತಂಜಿದ್ ಹಸನ್, ಪರ್ವೇಝ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದೋಯ್, ಝಾಕರ್ ಅಲಿ, ಶಮೀಮ್ ಹೊಸೈನ್, ಕಾಜಿ ನೂರುಲ್ ಹಸನ್ ಸೋಹನ್, ಸಾಕಿಬ್ ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಝುರ್ ರಹಮಾನ್, ತನ್ಜಿ ಶೈಫ್ ಉದ್ದೀನ್.