ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಪ್ರೇಮಿಗಳಿಗೆ ಬಹು ನಿರೀಕ್ಷಿತ ಏಷ್ಯಾಕಪ್ 2025 ಟೂರ್ನಿ ಇನ್ನೇನು ಆರಂಭವಾಗಲಿದೆ. ಸೆಪ್ಟೆಂಬರ್ 9 ರಿಂದ ಯುಎಇ ಆತಿಥ್ಯದಲ್ಲಿ ಆರಂಭಗೊಳ್ಳಲಿರುವ ಈ ಮಹತ್ವದ ಕ್ರಿಕೆಟ್ ಸಮರಕ್ಕೆ ದಿನಗಣನೆ ಈಗಾಗಲೇ ಶುರುವಾಗಿದೆ. ಸೆಪ್ಟೆಂಬರ್ 28 ರಂದು ನಡೆಯಲಿರುವ ಫೈನಲ್ ಪಂದ್ಯವರೆಗೂ ಏಷ್ಯನ್ ರಾಷ್ಟ್ರಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಭಾರತ ತಂಡದ ಅಂತಿಮ 15 ಸದಸ್ಯರ ಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದ್ದು, ಅದರಲ್ಲಿಯೇ ಪ್ರಮುಖವಾಗಿ ಚರ್ಚೆಯಾಗುತ್ತಿರುವ ಹೆಸರು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ.
ಇತ್ತೀಚಿನ ಐಪಿಎಲ್ 2025 ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನ ಹಿನ್ನಲೆಯಲ್ಲಿ ಜಿತೇಶ್ ಶರ್ಮಾ ಹೆಸರು ಮತ್ತಷ್ಟು ಬೆಳಕಿಗೆ ಬಂದಿದೆ. ಫಿನಿಶರ್ ಪಾತ್ರದಲ್ಲಿ ಆಡಿದ ಅವರು ಕೇವಲ 148 ಎಸೆತಗಳಲ್ಲಿ 261 ರನ್ ಬಾರಿಸಿ rcb ತಂಡವನ್ನು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೆ ತಲುಪಿಸಲು ಮಹತ್ವದ ಪಾತ್ರವಹಿಸಿದ್ದರು. ಅವರ ಈ ಭರ್ಜರಿ ಪ್ರದರ್ಶನದಿಂದಲೇ ಬಿಸಿಸಿಐ ಆಯ್ಕೆ ಸಮಿತಿ ಜಿತೇಶ್ ಅವರನ್ನು ಏಷ್ಯಾಕಪ್‌ಗೆ 2ನೇ ವಿಕೆಟ್ ಕೀಪರ್ ಆಗಿ ಪರಿಗಣಿಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ.
ಇನ್ನೊಂದು ಕಡೆ, ರಿಷಭ್ ಪಂತ್ ಈ ಬಾರಿಯ ಏಷ್ಯಾಕಪ್‌ನಿಂದ ಹೊರಗುಳಿಯುತ್ತಿರುವುದು ಖಚಿತವಾಗಿರುವುದರಿಂದ ಸಂಜು ಸ್ಯಾಮ್ಸನ್ ತಂಡದ ಪ್ರಮುಖ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಬ್ಯಾಕ್‌ಅಪ್ ಆಯ್ಕೆ ಎಂಬ ಹಿನ್ನಲೆಯಲ್ಲಿ ಜಿತೇಶ್ ಶರ್ಮಾ ಹೆಸರು ತೀವ್ರವಾಗಿ ಚರ್ಚೆಯಾಗುತ್ತಿದೆ. ಜಿತೇಶ್ ಈಗಾಗಲೇ ಟೀಮ್ ಇಂಡಿಯಾ ಪರ 9 ಟಿ20 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ 7 ಇನಿಂಗ್ಸ್‌ಗಳಲ್ಲಿ 100 ರನ್ ಕಲೆಹಾಕಿದ್ದಾರೆ. ಒಂದು ವರ್ಷದ ಬಳಿಕ ತಂಡಕ್ಕೆ ಮರುಪ್ರವೇಶ ಮಾಡುವ ನಿರೀಕ್ಷೆಯಲ್ಲಿ ಇರುವ ಅವರು ತಮ್ಮ ಸ್ಫೋಟಕ ಆಟದ ಮೂಲಕ ಮತ್ತೆ ಅಭಿಮಾನಿಗಳ ಮನ ಗೆಲ್ಲಲು ತುದಿಗಾಲಲ್ಲಿ ನಿಂತಿದ್ದಾರೆ.
ಏಷ್ಯಾಕಪ್ 2025 ಭಾರತಕ್ಕಾಗಿ ಬಹುಮುಖ್ಯ ಟೂರ್ನಿ ಆಗಿದ್ದು, ಹೊಸ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಲು ಇದು ದೊಡ್ಡ ವೇದಿಕೆ. ಜಿತೇಶ್ ಶರ್ಮಾ ಪ್ರದರ್ಶನ ತಂಡದ ಪರ ಬಲವಾಗಬಹುದೆಂಬ ನಿರೀಕ್ಷೆ ಹೆಚ್ಚಿದ್ದು, ಅಭಿಮಾನಿಗಳು ಈಗಾಗಲೇ ಅವರ ಹೆಸರು ಪಟ್ಟಿ ಸೇರುವತ್ತ ಕಾತರದಿಂದ ಕಾಯುತ್ತಿದ್ದಾರೆ.