ಏಷ್ಯಾಕಪ್ 2025: ಬ್ಯಾಟಿಂಗ್ ಕ್ರಮಾಂಕ ಬದಲಿಸಿಕೊಳ್ತಾರಾ ಸಂಜು ಸ್ಯಾಮ್ಸನ್‌?

2025ರ ಏಷ್ಯಾಕಪ್ ಆರಂಭವಾಗಲು ಕೇವಲ ಕೆಲವು ದಿನಗಳು ಬಾಕಿ ಇರುವಾಗ, ಭಾರತ ತಂಡದ ಅಂತಿಮ ಹನ್ನೊಂದರಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ತಾರಕ್ಕೇರಿದೆ. ವಿಶೇಷವಾಗಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರ ಪಾತ್ರದ ಬಗ್ಗೆ ಚರ್ಚೆ ಹೆಚ್ಚಾಗಿದೆ. ಕಳೆದ ವರ್ಷ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಸಂಜು, ಈ ಬಾರಿ ಹೊಸ ಸವಾಲನ್ನು ಎದುರಿಸುತ್ತಿದ್ದಾರೆ. ಕಾರಣ, ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಎಂಬ ಇಬ್ಬರು ಯುವ ಆರಂಭಿಕರ ಆಗಮನದಿಂದ ಅವರ ಸ್ಥಾನ ಸ್ವಲ್ಪ ಗೊಂದಲದಲ್ಲಿದೆ. ಇದೇ ಕಾರಣಕ್ಕೆ ಸಂಜು ಸ್ಯಾಮ್ಸನ್ ತಮ್ಮ ಆಟದ ಕ್ರಮಾಂಕವನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

2024ರಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಮೂರು ಶತಕಗಳನ್ನು ಬಾರಿಸಿದ ಸಂಜು, ಈಗ ಏಷ್ಯಾಕಪ್‌ನಲ್ಲಿ ಅದೇ ಸ್ಥಾನವನ್ನು ಪಡೆಯುವಲ್ಲಿ ಅನುಮಾನ ಎದುರಿಸುತ್ತಿದ್ದಾರೆ. ಅಭಿಷೇಕ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಅವರ ಆಯ್ಕೆಯಿಂದ ಆರಂಭಿಕ ಸ್ಥಾನಕ್ಕೆ ಪೈಪೋಟಿ ತೀವ್ರವಾಗಿದೆ.

ಪ್ರಸ್ತುತ ನಡೆಯುತ್ತಿರುವ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಪರ ಆಡುತ್ತಿರುವ ಸಂಜು, ಅಲ್ಲಿ ಐದನೇ ಕ್ರಮಾಂಕದಲ್ಲಿ ಹೆಸರು ಪಡೆದಿದ್ದಾರೆ. ಇದರಿಂದ ಅವರು ಮಧ್ಯಮ ಕ್ರಮಾಂಕದ ಆಟಕ್ಕೆ ತಾವು ಹೊಂದಿಕೊಳ್ಳಲು ಬಯಸುತ್ತಿರುವುದು ಗೋಚರಿಸುತ್ತಿದೆ.

2025ರ ಏಷ್ಯಾಕಪ್‌ಗೆ ಜಿತೇಶ್ ಶರ್ಮಾ ಕೂಡ ವಿಕೆಟ್ ಕೀಪರ್‌ ಆಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯವಾಗಿ ಐದು ಅಥವಾ ಆರು ಕ್ರಮಾಂಕದಲ್ಲಿ ಆಡುವ ಜಿತೇಶ್ ಇದ್ದಾಗ, ಸಂಜು ಕೂಡ ಅದೇ ಕ್ರಮಾಂಕಕ್ಕಾಗಿ ಸಿದ್ಧರಾಗುತ್ತಿದ್ದಾರೆ.

ಇದುವರೆಗೆ 42 ಟಿ20 ಪಂದ್ಯಗಳನ್ನು ಆಡಿರುವ ಸಂಜು 861 ರನ್ ಗಳಿಸಿದ್ದಾರೆ. ಆರಂಭಿಕ ಆಟಗಾರನಾಗಿ 14 ಪಂದ್ಯಗಳಲ್ಲಿ 512 ರನ್ ಗಳಿಸಿದ್ದು, ಐದನೇ ಕ್ರಮಾಂಕದಲ್ಲಿ ಆಡುವಾಗ ಅವರ ಅಂಕಿ-ಅಂಶಗಳು ತುಸು ಕುಸಿತಗೊಂಡಿವೆ. ಇದರಿಂದ ಆರಂಭಿಕ ಸ್ಥಾನವೇ ಅವರಿಗೆ ಹೆಚ್ಚು ಸೂಕ್ತವೆಂಬುದನ್ನು ತೋರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!