ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಕುರಿತು ಕೌನ್ಸಿಲ್ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಾಗಿ ತಿಳಿಸಿದೆ.
ಟೂರ್ನಿಯಲ್ಲಿ ಭಾರತ, ಪಾಕಿಸ್ತಾ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾ ಹಾಗೂ ನೇಪಾಳ ತಂಡಗಳು ಭಾಗವಹಿಸಿಲಿದ್ದು ಆಗಸ್ಟ್ 31 ರಿಂದ ಸೆಪ್ಟೆಂಬರ್ 17ರವರೆಗೆ ಟೂರ್ನಿ ನಡೆಯಲಿದೆ ಎಂದು ತಿಳಿಸಿದೆ.
ಒಟ್ಟು 13 ಏಕದಿನ ಪಂದ್ಯಗಳು ನಡೆಯಲಿದೆ. ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದ್ದರೆ, ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಿಕೊಳ್ಳಲಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಒಂದೇ ಆವೃತ್ತಿ ಎರಡು ದೇಶಗಳಲ್ಲಿ ನಡೆಯಲಿದೆ.
ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಅತಿಥ್ಯ ವಹಿಸಿಕೊಳ್ಳಬೇಕಿತ್ತು. ಆದರೆ, ಪಾಕಿಸ್ತಾನದಲ್ಲಿ ಭಾರತ ತಂಡ ಪಂದ್ಯವಾಡಲು ಕೇಂದ್ರ ಸರ್ಕಾರದ ಅನುಮತಿ ನೀಡೋದಿಲ್ಲ. ಇದಕ್ಕಾಗಿ ಟೂರ್ನಿಯನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದರೆ, ಪಾಕಿಸ್ತಾನ ಇದಕ್ಕೆ ನಿರಾಕರಿಸಿತ್ತು. ಕೊನೆಗೆ ಎಸಿಸಿ ಸಭೆಯಲ್ಲಿ ಈ ಬಾರಿಯ ಏಷ್ಯಾಕಪ್‌ಅನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಒಪ್ಪಿಗೆ ನೀಡಲಾಗಿದೆ.
ಆರು ತಂಡಗಳು ಎರಡು ಗುಂಪುಗಳನ್ನಾಗಿ ವಿಭಾಗಿಸಲಾಗಿದ್ದು, ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯಲಿದೆ. ಇಲ್ಲಿನ ಅಗ್ರ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಬಹುತೇಕ ಒಂದೇ ಗುಂಪಿನಲ್ಲಿ ಸ್ಥಾನ ಪಡೆಯಲು ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಗರಿಷ್ಠ ಮೂರು ಭಾರತ-ಪಾಕಿಸ್ತಾನ ಮುಖಾಮುಖಿ ನೋಡುವ ಅವಕಾಶ ಸಿಗಲಿದೆ.
ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನವೇ ಪ್ರಧಾನ ಆತಿಥ್ಯ ರಾಷ್ಟ್ರವಾಗಿದ್ದರೂ, ಪಾಕಿಸ್ತಾನದಲ್ಲಿ ಏಷ್ಯಾಕಪ್‌ನ ನಾಲ್ಕು ಪಂದ್ಯಗಳಷ್ಟೇ ನಡೆಯಲಿದೆ. ಪಾಕಿಸ್ತಾನದ ಆತಿಥ್ಯದಲ್ಲಿ ಯುಎಇಯಲ್ಲಿ ಟೂರ್ನಿ ನಡೆಸುವ ಯೋಜನೆಯನ್ನೂ ಮಾಡಲಾಗಿತ್ತು. ಆದರೆ, ಯುಎಇ ತಟಸ್ಥ ಸ್ಥಳವನ್ನು ಬಾಂಗ್ಲಾದೇಶ ನಿರಾಕರಣೆ ಮಾಡಿತ್ತು. ಸೆಪ್ಟೆಂಬರ್ ಸಮಯದಲ್ಲಿ ಯುಎಇಯಲ್ಲಿ ಅತಿಯಾದ ಬಿಸಿಲಿನ ವಾತಾವರಣ ಇರುತ್ತದೆ ಎನ್ನುವ ಕಾರಣ ನೀಡಿ ಬಾಂಗ್ಲಾದೇಶ ನಿರಾಕರಿಸಿತ್ತು.