Wednesday, October 22, 2025

ಇನ್ನೂ ಕೈ ಸೇರದ ಏಷ್ಯಾಕಪ್ ಟ್ರೋಫಿ: ಬಿಸಿಸಿಐ ಪತ್ರಕ್ಕೆ ಪಾಕ್ ನಖ್ವಿ ಕೊಟ್ಟ ರಿಪ್ಲೈ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೂ ಕೈ ಸೇರದ ಏಷ್ಯಾಕಪ್ ಟ್ರೋಫಿಯನ್ನು ಹಸ್ತಾಂತರಿಸಬೇಕೆಂಬ ಬಿಸಿಸಿಐ ಇ-ಮೇಲ್‌ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ, ಪಾಕ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಹಾಗೂ ಗೃಹ ಸಚಿವ ಮೊಹ್ಸಿನ್ ನಖ್ವಿ ಪ್ರತಿಕ್ರಿಯಿಸಿದ್ದಾರೆ.

ಯಾರಾದ್ರೂ ಆಟಗಾರನನ್ನು ಕಳುಹಿಸಿದರೆ ಅವರ ಕೈಗೆ ಟ್ರೋಫಿ ಕೊಡಬಹುದು, ನವೆಂಬರ್ ಮೊದಲ ವಾರದಲ್ಲಿ ಇದಕ್ಕಾಗಿ ಒಂದು ಕಾರ್ಯಕ್ರಮ ಆಯೋಜಿಸಬಹುದು ಎಂದು ನಖ್ವಿ ಬಿಸಿಸಿಐಗೆ ತಿಳಿಸಿದ್ದಾಗಿ ಪಾಕ್ ಪತ್ರಕರ್ತ ಫೈಜಾನ್ ಲಖಾನಿ ಹೇಳಿದ್ದಾರೆ.

ಏಷ್ಯಾಕಪ್ ಟ್ರೋಫಿ ವಿವಾದದ ಬಗ್ಗೆ ಬಿಸಿಸಿಐ ಮತ್ತೊಮ್ಮೆ ಟ್ರೋಫಿ ಹಸ್ತಾಂತರಿಸುವಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಪತ್ರ ಬರೆದಿತ್ತು. ಇದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರು, ನವೆಂಬರ್ ಮೊದಲ ವಾರದಲ್ಲಿ ಕಾರ್ಯಕ್ರಮ ಆಯೋಜಿಸಿ, ಅಲ್ಲಿ ಆಟಗಾರನೊಬ್ಬನ ಕೈಗೆ ಟ್ರೋಫಿ ಹಸ್ತಾಂತರಿಸುವುದಾಗಿ ಉತ್ತರಿಸಿದ್ದಾರೆ ಎಂದು ಲಖಾನಿ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಏಷ್ಯಾಕಪ್ ಟ್ರೋಫಿ ಈಗಲೂ ದುಬೈನಲ್ಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಧಾನ ಕಚೇರಿಯಲ್ಲಿದೆ.

ಏಷ್ಯಾಕಪ್ ಟ್ರೋಫಿ ನೀಡುವಂತೆ ಈಗಾಗಲೇ ಮೊಹ್ಸಿನ್ ನಖ್ವಿಗೆ ಇ-ಮೇಲ್ ಕಳುಹಿಸಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಉತ್ತರ ಬರದಿದ್ದರೆ ಐಸಿಸಿಯನ್ನು ಅಧಿಕೃತವಾಗಿ ಸಂಪರ್ಕಿಸಲು ನಿರ್ಧರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದರು.

error: Content is protected !!