ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಆರ್ಡರ್‌ನಲ್ಲಾಗುವ ಮೋಸ, ವಂಚನೆಯ ಬಗ್ಗೆ ನಾವೆಲ್ಲಾ ಕೇಳಿರಬಹುದು. ಆದ್ರೆ ಇಲ್ಲೊಬ್ಬರು ಮಹಿಳೆ ಸಂಸ್ಥೆಯೊಂದರ ಬಳಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೊಡುವಂತೆ ಮನವಿ ಮಾಡಿದ್ದಾರೆ. ಆದ್ರೆ ಪಾರ್ಸೆಲ್ ತೆರೆದು ನೋಡಿದಾಗ ಮಹಿಳೆಗೆ ಶಾಕ್ ಒಂದು ಕಾದಿತ್ತು.
ಮಹಿಳೆಯೊಬ್ಬರ ಮನೆ ಕಟ್ಟೋ ಪ್ಲಾನ್‌ನಲ್ಲಿದ್ದು, ಇದಕ್ಕಾಗಿ ಬೇಕಾದ ಸಾಮಾಗ್ರಿಗಾಗಿ ಸಂಸ್ಥೆಯೊಂದಕ್ಕೆ ಮನವಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಈ ಬಾರಿ ಅರ್ಜಿ ಸಲ್ಲಿಸಿದಾಗ ಮಹಿಳೆ ಪಾರ್ಸೆಲ್ ಬದಲಿಗೆ ಬಾಕ್ಸ್‌ನಲ್ಲಿ ಮೃತದೇಹವನ್ನು ಪಡೆದಿದ್ದಾರೆ.
ಈ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ಅಪರಿಚಿತ ವ್ಯಕ್ತಿಯ ಶವವಿದ್ದ ಪಾರ್ಸೆಲ್ ನೋಡಿ ಶಾಕ್ ಆಗಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ನಾಗ ತುಳಸಿ ಎಂಬ ಮಹಿಳೆ ಎಂದು ಗುರುತಿಸಲಾಗಿದ್ದು, ಈ ಹಿಂದೆ ತನ್ನ ಮನೆ ನಿರ್ಮಿಸಲು ಹಣಕಾಸಿನ ನೆರವು ಕೋರಿ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ಆರಂಭದಲ್ಲಿ ಈ ಸಂಸ್ಥೆ ಮಹಿಳೆಗೆ ಟೈಲ್ಸ್ ಕಳುಹಿಸಿತ್ತು. ತುಳಸಿ ನಂತರ ಹೆಚ್ಚಿನ ಸಹಾಯವನ್ನು ಕೋರಿದ್ದರು. ಇದಕ್ಕಾಗಿ ಲೈಟ್‌ಗಳು, ಫ್ಯಾನ್‌ಗಳು ಮತ್ತು ಸ್ವಿಚ್‌ಗಳು ಸೇರಿದಂತೆ ವಿದ್ಯುತ್ ಉಪಕರಣಗಳನ್ನು ನೀಡೋದಾಗಿ ಭರವಸೆ ನೀಡಲಾಯಿತು ಎಂದು ವರದಿಯಾಗಿದೆ. ಇನ್ನು ಈ ಬಗ್ಗೆ ವಾಟ್ಸಾಪ್ ಮೆಸೇಜನ್ನು ಮಹಿಳೆ ಸ್ವೀಕರಿಸಿದ್ದರು.
ಅದೇ ರೀತಿ ಗುರುವಾರ ಸಂಜೆ, ಒಬ್ಬ ವ್ಯಕ್ತಿಯು ಆಕೆಯ ಮನೆ ಬಾಗಿಲಿಗೆ ಬಂದು ಪಾರ್ಸೆಲ್ ಕೊಟ್ಟು, ವಿದ್ಯುತ್ ಸಾಧನಗಳು ಇರೋದನ್ನು ತಿಳಿಸಿದ್ದಾನೆ. ಆದರೆ ಬಾಕ್ಸ್ ಓಪನ್ ಮಾಡಿ ನೋಡಿದಾಗ ವಿದ್ಯುತ್ ಸಾಧನ ಬದಲಿಗೆ ವ್ಯಕ್ತಿಯೊಬ್ಬನ ಶವವಿತ್ತು. ಇದನ್ನು ನೋಡಿದ ಮಹಿಳೆ ಆಘಾತಗೊಂಡಿದ್ದಾಳೆ.
ಇದನ್ನು ನೋಡಿ ಮಹಿಳೆ ಶಾಕ್ ಆಗಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿ, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸುಳ್ಳು ಹೇಳಿ ಶವವಿರೋ ಪಾರ್ಸೆಲ್ ಕಳುಹಿಸಿದ್ದು ಮಾತ್ರವಲ್ಲದೇ, 1.30 ಕೋಟಿ ಬೇಡಿಕೆಯಿಟ್ಟಿರುವ ಪತ್ರವೊಂದನ್ನೂ ಕಳುಹಿಸಿದ್ದರು. ಇನ್ನು ಈ ಬೇಡಿಕೆಗೆ ಅಸ್ತು ಹೇಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕುಟುಂಬಕ್ಕೆ ಬೆದರಿಕೆ ಹಾಕಿದ್ದರು.