ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಬಯಲಾಟ ಕಟೀಲು ರಥಬೀದಿಯಲ್ಲಿ ನಡೆದ ಸಂದರ್ಭ ಕಟೀಲು ದೇಗುಲದ ಅರ್ಚಕರಾಗಿರುವ ಆಸ್ರಣ್ಣ ಸಹೋದರರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವೀಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ವೇಷಧಾರಿಗಳಾಗಿ ಸೇವೆ ಸಲ್ಲಿಸಿದರು.
ಕಟೀಲು ದೇಗುಲದ ಅರ್ಚಕರಾಗಿದ್ದ ದಿವಂಗತ ಸದಾನಂದ ಆಸ್ರಣ್ಣರು ವರ್ಷಂಪ್ರತಿ ಕಟೀಲು ಮೇಳದ ಸೇವೆಯಾಟ ಆಡಿಸುತ್ತಿದ್ದರು. ಅವರ ನಿಧನದ ಬಳಿಕ ಅನಂತಪದ್ಮನಾಭ ಆಸ್ರಣ್ಣ ಸಹೋದರರು ಸೇವೆಯಾಟವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸುಮಾರು ಐವತ್ತೈದು ವರುಷಗಳಿಂದ ನಡೆಯುತ್ತ ಬಂದಿರುವ ಈ ಸೇವೆಯಾಟದಲ್ಲಿ ಈ ಮೂವರು ಸಹೋದರರು ಸುಮಾರು ಹದಿನೈದು ಇಪ್ಪತ್ತು ವರುಷಗಳಿಂದ ವೇಷಹಾಕುತ್ತ ಬಂದಿದ್ದಾರೆ. ಶುಕ್ರವಾರ ಪುತ್ರಕಾಮೇಷ್ಟಿ, ಸೀತಾಕಲ್ಯಾಣ, ರಾವಣ ವಧೆ, ನಿಜಪಟ್ಟಾಭಿಷೇಕ ಯಕ್ಷಗಾ ಪ್ರಸಂಗಗಳು ಪ್ರದರ್ಶಿತವಾದವು. ಅನಂತ ಆಸ್ರಣ್ಣ ದಶರಥನಾಗಿ, ಪ್ರಸಾದ ಆಸ್ರಣ್ಣ ಜನಕ ಮಹಾರಾಜನಾಗಿ, ಶ್ರೀಹರಿ ಆಸ್ರಣ್ಣ ವಿಶ್ವಾಮಿತ್ರನಾಗಿ ಕಾಣಿಸಿಕೊಂಡರು. ಪ್ರಸಾದ ಆಸ್ರಣ್ಣರ ಮಗ ಸದಾನಂದ ಆಸ್ರಣ್ಣ ಶ್ರೀರಾಮನಾಗಿ ಪಾತ್ರವಹಿಸಿದರು.
ಕಟೀಲಿನ ಅರ್ಚಕರ ಪೈಕಿ ದಿವಂಗತ ಗೋಪಾಕೃಷ್ಣ ಆಸ್ರಣ್ಣರು ವೇಷ ಹಾಕುತ್ತಿದ್ದರು. ಆಸ್ರಣ್ಣ ಕುಟುಂಬದಲ್ಲಿ ದೇವೀಕುಮಾರ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಶ್ರೀಕರ ಆಸ್ರಣ್ಣ, ಶ್ರೀನಿವಾಸ ಆಸ್ರಣ್ಣ ಇವರೆಲ್ಲ ಯಕ್ಷಗಾನದಲ್ಲಿ ವೇಷಧಾರಿಗಳಾಗಿ ಸಮರ್ಥರು. ತಾಳಮದ್ದಲೆಗಳಲ್ಲೂ ಎಲ್ಲರೂ ಭಾಗವಹಿಸುತ್ತಾರೆ. ಕಟೀಲು ದೇವಿಗೆ ಯಕ್ಷಗಾನ ಅತ್ಯಂತ ಪ್ರಿಯವಾದ ಸೇವೆಯಾಗಿದ್ದು, ಅರ್ಚಕರೂ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುತ್ತಾರೆ. ನಳಿನ್ ಕುಮಾರ್ ಮುಂತಾದ ಅನೇಕರು ಯಕ್ಷಗಾನ ವೇಷಧಾರಿಗಳಾದ ಆಸ್ರಣ್ಣರೊಂದಿಗೆ ಪೋಟೊ ತೆಗೆಸಿಕೊಂಡು ಸಂಭ್ರಮಿಸಿದರು.