ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವುದಿನಗಳಿಂದ ಅಸ್ಸಾಂನ ಮೇಲೆ ವಕ್ರದೃಷ್ಟಿ ಬೀರಿರುವ ವರುಣನಿಂದಾಗಿ ಅಸ್ಸಾಂ ಸಂಪೂರ್ಣವಾಗಿ ತತ್ತರಿಸಿದೆ. ರಾಜ್ಯದ 23 ಜಿಲ್ಲೆಗಳು ನೀರಿನ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿವೆ.
ಬಜಾಲಿ, ಬಕ್ಸಾ, ಬರ್ಪೇಟಾ, ಬಿಸ್ವನಾಥ್, ಬೊಂಗೈಗಾಂವ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್, ದಿಮಾ ಹಸಾವೊ, ಗೋಲ್ಪಾರಾ, ಹೋಜೈ, ಕಾಮ್ರೂಪ್, ಕಾಮ್ರೂಪ್ ಮೆಟ್ರೋಪಾಲಿಟನ್, ಕರ್ಬಿ ಆಂಗ್ಲಾಂಗ್ ವೆಸ್ಟ್, ಕೊಕ್ರಜಾರ್, ಲಖಿಂಪುರ, ನಲಿಬಾರಿ, ಮಜುಯಲ್ , ಸೋನಿತ್ಪುರ್, ತಮುಲ್ಪುರ್ ಮತ್ತು ಉದಲ್ಗುರಿ ಜಿಲ್ಲೆಗಳು ಬಾಧಿತವಾಗಿದ್ದು ಭೂಕುಸಿತ, ಪ್ರವಾಹದಲ್ಲಿ ಇಲ್ಲಿಯವರೆಗೂ ಎಂಟು ಮಂದಿ ಸಾವನ್ನಪ್ಪಿದ್ದು 11 ಲಕ್ಷಜನ ಸಂತ್ರಸ್ತರಾಗಿದ್ದಾರೆ. ಗೋಲ್ಪಾರಾ ಜಿಲ್ಲೆಯಲ್ಲಿ ಭೂಕುಸಿತದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
15 ಪೀಡಿತ ಜಿಲ್ಲೆಗಳಿಂದ 68,331 ಜನರು ಆಯಾ ಜಿಲ್ಲಾಡಳಿತಗಳು ಸ್ಥಾಪಿಸಿರುವ 150 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಅಸ್ಸಾಂ ಪೊಲೀಸರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರವಾಹ ಪರಿಸ್ಥಿತಿ ಹದಗೆಟ್ಟಿದ್ದು ರಾಜ್ಯದ ಒಟ್ಟು 1,702 ಗ್ರಾಮಗಳು ಹಾನಿಗೊಳಗಾಗಿವೆ.
“ಇಲ್ಲಿನ ಹಳ್ಳಿಗಳಲ್ಲಿ ಸುಮಾರು 130 ಕುಟುಂಬಗಳು ಇನ್ನೂ ಸಿಲುಕಿಕೊಂಡಿವೆ. ನಾವು ಈಗ ನಮ್ಮ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದೇವೆ. ನಾವು ಮೊದಲು ಮಕ್ಕಳು ಮತ್ತು ರೋಗಿಗಳನ್ನು ರಕ್ಷಿಸಲಾಗುತ್ತಿದೆ” ಎಂದು ಕೋಕ್ರಾಜಾರ್‌ನಲ್ಲಿ ಪೋಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬ್ರಹ್ಮಪುತ್ರ, ಮಾನಸ್, ಪಗ್ಲಾಡಿಯಾ, ಪುತಿಮರಿ, ಕೊಪಿಲಿ ಮತ್ತು ಗೌರಂಗ್ ನದಿಗಳು ಹಲವು ಸ್ಥಳಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಧಾರಾಕಾರ ಮಳೆಯು ಅಸ್ಸಾಂನಾದ್ಯಂತ ಹಾನಿಯನ್ನುಂಟು ಮಾಡಿದೆ. ಮುಂದಿನ ಕೆಲವು ದಿನ ಪ್ರತಿಕೂಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.