ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗ, ಜಿಂಕೆ ಸೇರಿದಂತೆ 17 ಕಾಡು ಪ್ರಾಣಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, 72 ಪ್ರಾಣಿಗಳನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿ ಪ್ರಕಾರ, ಪ್ರಸ್ತುತ 32 ಕಾಡು ಪ್ರಾಣಿಗಳು ಚಿಕಿತ್ಸೆಯಲ್ಲಿವೆ ಎನ್ನಲಾಗಿದೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಘೋರವಾಗಿದೆ, ಏಕೆಂದರೆ ಉದ್ಯಾನದಲ್ಲಿರುವ 173 ಅರಣ್ಯ ಶಿಬಿರಗಳು ಇನ್ನೂ ಪ್ರವಾಹ ಪರಿಸ್ಥಿತಿಯಲ್ಲಿ ತತ್ತರಿಸುತ್ತಿವೆ.
ಅಸ್ಸಾಂನಲ್ಲಿ ಪ್ರವಾಹಕ್ಕೆ ಇದುವರೆಗೆ 46 ಜನರು ಸಾವನ್ನಪ್ಪಿದ್ದಾರೆ. ಬುಧವಾರ ಪ್ರವಾಹದಲ್ಲಿ ಮುಳುಗಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಎರಡನೇ ಅಲೆಯ ಪ್ರವಾಹದಿಂದ 29 ಜಿಲ್ಲೆಗಳ 16.25 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿರುವ ಕಾರಣ ರಾಜ್ಯದ ಒಟ್ಟಾರೆ ಪ್ರವಾಹ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.