ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಲೇಡಿ ಸಿಂಗಂ ಎಂದೇ ಖ್ಯಾತರಾಗಿದ್ದ ಜುನ್ಮಣಿ ರಭಾ (30) ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ, ಆಕೆಯ ಸಾವಿನ ಮೇಲೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ರಾಜ್ಯ ಸರ್ಕಾರದ ಆದೇಶದಂತೆ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಅಸ್ಸಾಂ ಪೊಲೀಸರು ಶಿಫಾರಸು ಮಾಡಿರುವುದಾಗಿ ಡಿಜಿಪಿ ಜಿಪಿ ಸಿಂಗ್ ತಿಳಿಸಿದ್ದಾರೆ.
ಸಿಐಡಿ ಇಲಾಖೆ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ರಾಭಾ ಸಾವಿನ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಡಿಜಿಪಿ ಸಿಂಗ್ ಹೇಳಿದರು.
ಮರಣೋತ್ತರ ಪರೀಕ್ಷೆಯ ವರದಿ ಹೀಗಿದೆ
ಲೇಡಿ ಸಿಂಗಂ ಎಂದೇ ಖ್ಯಾತರಾಗಿರುವ ಜುನ್ಮಣಿ ರಾಭಾ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹಲವು ವಿಷಯಗಳು ಬೆಳಕಿಗೆ ಬಂದಿವೆ. ಆಕೆಯ ಪಕ್ಕೆಲುಬುಗಳು ಎರಡೂ ಬದಿಯಲ್ಲಿ ಮುರಿದಿರುವುದು ಕಂಡುಬಂದಿದೆ. ಮೆದುಳು ರಕ್ತಸ್ರಾವ ಮತ್ತು ಹೃದಯ ಸ್ತಂಭನದಿಂದ ರಭಾ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿದುಬಂದಿದೆ. ಹಾಗೆಯೇ ಆಕೆಯ ಎರಡು ಮೊಣಕಾಲುಗಳು, ಮೊಣಕೈಗಳ ಮೇಲೆ ಗಾಯಗಳು ಕಂಡುಬಂದಿವೆ.
ಆಡಿಯೋ ಬೆಳಕಿಗೆ
ರಾಭಾ ಅವರ ವಾಹನ ಟ್ರಕ್‌ಗೆ ಡಿಕ್ಕಿ ಹೊಡೆದಿಲ್ಲ ಎಂದು ಪ್ರತ್ಯಕ್ಷದರ್ಶಿ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಟ್ರಕ್ ಬಂದು ಕಾರಿಗೆ ಡಿಕ್ಕಿ ಹೊಡೆದಾಗ ಕಾರು ನಿಂತಿತ್ತು ಎಂದು ಹೇಳಿದ್ದಾರೆ. ಟ್ರಕ್ ಡಿಕ್ಕಿ ಹೊಡೆಯುವ ಮೊದಲು ಕಾರಿನಿಂದ ಇಬ್ಬರು ಇಳಿದರು ಎಂಬ ವಿಚಾರ ಇದೀಗ ಸಂಚಲನ ಮೂಡಿಸಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆಯ ಕೆಲ ಉನ್ನತಾಧಿಕಾರಿಗಳು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಪೇದೆಯೊಬ್ಬರು ಹೇಳಿರುವ ಆಡಿಯೋ ಕ್ಲಿಪ್ ಬಿಡುಗಡೆಯಾಗಿದೆ. ಕಾನ್ಸ್‌ಟೇಬಲ್‌ನನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.