ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಲೀಸ್ ಠಾಣೆಯಲ್ಲೇ ಸಬ್ ಇನ್ಸ್ಪೆಕ್ಟರ್ ಮೇಲೆ ಆರೋಪಿಯೊಬ್ಬ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಪೀಣ್ಯ ಠಾಣೆಯಲ್ಲಿ ಇಂದು ನಡೆದಿದೆ.
ಸಿದ್ದು ಹೂಗಾರ ದಾಳಿಗೆ ಒಳಗಾದ ಪಿಸ್‌ಐ. ಪೊಲೀಸ್ ಠಾಣೆಯ ಬಾಗಿಲಲ್ಲೇ ಕಾಲಲ್ಲಿ ಒದ್ದು ಪಿಎಸ್‌ಐ ಮೇಲೆ ಹಲ್ಲೆ ಮಾಡಲಾಗಿದೆ.
ಮೌನೇಶ್ ಎಂಬಾತ ಹಲ್ಲೆ ಮಾಡಿರುವ ವ್ಯಕ್ತಿ. ಪಾಸ್ ವಿಚಾರಕ್ಕೆ ಬಿಎಂಟಿಸಿ ಕಂಡಕ್ಟರ್ ಜತೆ ಮೌನೇಶ್ ಗಲಾಟೆ ಮಾಡಿದ್ದನು. ಹೀಗಾಗಿ ಬಿಎಂಟಿಸಿ ಸಿಬ್ಬಂದಿ ಬಸ್ ಸಮೇತ ಆತನನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರು. ಈ ಬಗ್ಗೆ ಮೌನೇಶ್ನನ್ನು ಪಿಎಸ್‌ಐ ಸಿದ್ದು ಹೂಗಾರ್ ವಿಚಾರಣೆ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.
ಗಾಯಗೊಂಡಿರುವ ಪಿಎಸ್‌ಐ ಸಿದ್ದು ಹೂಗಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಪೀಣ್ಯ ಠಾಣೆಗೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಮತ್ತು ಪಿಎಸ್‌ಐ ಆರೋಗ್ಯವನ್ನು ವಿಚಾರಿಸಿದ್ದಾರೆ.
ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ.