ಹೊಸ ದಿಗಂತ ವರದಿ, ಶನಿವಾರಸಂತೆ:
ಭಾರತದ ರಕ್ಷಣಾ ವಿಭಾಗಗಳ ಪ್ರಥಮ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹುಟ್ಟು ಹಬ್ಬವನ್ನು ಅವರ ಹಿಟ್ಟೂರಾದ ಶನಿವಾರಸಂತೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅಭಿಮಾನಿಗಳ ಬಳಗ, ಗ್ರಾ.ಪಂ. ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಶುಕ್ರವಾರ ಆಚರಿಸಲಾಯಿತು.
ಶನಿವಾರಸಂತೆಯಲ್ಲಿ ಜನರಲ್ ಕಾರ್ಯಪ್ಪ ಅವರು ಜನಿಸಿದ ಮನೆಯ (ಇದೀಗ ಸಾರ್ವಜನಿಕ ಗ್ರಂಥಾಲಯ) ಮುಂಭಾಗ ಶುಕ್ರವಾರ ಬೆಳಗ್ಗೆ ಕಾರ್ಯಪ್ಪ ಅಭಿಮಾನಿ ಬಳಗ, ಸಾರ್ವಜನಿಕರು ಕಾರ್ಯಪ್ಪ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು.
ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯಪ್ಪ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಾಂಕೇತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಸಂಯುಕ್ತ ಪ.ಪೂ.ಕಾಲೇಜಿನ ಶಿಕ್ಷಕ ಕೆ.ಪಿ.ಜಯಕುಮಾರ್ ಅವರು ಮಾತನಾಡಿ, ಭಾರತದ ಮೂರು ರಕ್ಷಣಾ ವಿಭಾಗಗಳ ಪ್ರಥಮ ಮಹಾದಂಡ ನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಶಿಸ್ತಿನ ಸಿಪಾಯಿಯಾಗಿದ್ದು, ಅವರ ಶಿಸ್ತು, ಸಮಯ ಪಾಲನೆ, ರಾಷ್ಟ್ರಭಕ್ತಿ ಮುಂತಾದವುಗಳನ್ನು ನಾವೆಲ್ಲರೂ ಕಲಿಯಬೇಕಾಗಿದೆ ಎಂದರು.
ಕಾರ್ಯಪ್ಪ ಅವರು ವಿಶ್ವಮಟ್ಟದಲ್ಲಿ ಹೆಸರು ಮಾಡಿದ ಧೀಮಂತ ವ್ಯಕ್ತಿ. ಕೊಡಗು ಜಿಲ್ಲೆಯವರಾದ ಕಾರ್ಯಪ್ಪ ಅವರು ಭಾರತದ ಭೂದಳ, ವಾಯುದಳ, ನೌಕದಳ ಸೇರಿದಂತೆ ಮೂರು ರಕ್ಷಣಾ ವಿಭಾಗಗಳಿಗೆ ಮಹಾದಂಡ ನಾಯಕರಾಗಿ ಮಾಡಿರುವ ಸಾಧನೆ ದೇಶಕ್ಕೆ ನೀಡಿರುವ ಸೇವೆಯನ್ನು ನಾವೆಲ್ಲರೂ ಮನನ ಮಾಡಿಕೊಂಡು ಹೆಮ್ಮೆ ಪಡಬೇಕು ಹಾಗೂ ಅವರು ಶನಿವಾರಸಂತೆಯಲ್ಲಿ ಜನಿಸಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ಎಸ್.ಎನ್.ರಘು, ಸರ್ದಾರ್ ಅಹಮದ್, ಎಸ್.ಸಿ.ಶರತ್ ಶೇಖರ್, ಗೀತಾ ಹರೀಶ್, ಶನಿವಾರಸಂತೆ ಕ್ಲಸ್ಟರ್ ಸಿಆರ್‍ಪಿ ದಿನೇಶ್, ಕೊಡ್ಲಿಪೇಟೆ ಸಿಆರ್‍ಪಿ ಸುರೇಶ್, ಕಾರ್ಯಪ್ಪ ಅಭಿಮಾನಿ ಬಳಗದ ಬಿಲಾಲ್, ಗ್ರಂಥಾಲಯ ಮೇಲ್ವಿಚಾರಕಿ ಪ್ರಣುತಾ, ನಿವೃತ್ತ ಸೈನಿಕ ಬೆಳ್ಯಪ್ಪ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ, ಪ್ರಮುಖರಾದ ಮೋಹನ್‍ಲಾಲ್ ಚೌಧರಿ, ನಿವೃತ್ತ ಗ್ರಂಥಪಾಲಕ ಮಹೇಶ್ ಮತ್ತು ಸಾರ್ವಜನಿಕರು ಹಾಜರಿದ್ದರು.