ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೊಮಿನಿಕನ್ ರಾಜಧಾನಿಯಲ್ಲಿ ಮಂಗಳವಾರ ಐಕಾನಿಕ್ ನೈಟ್‌ಕ್ಲಬ್‌ನ ಛಾವಣಿ ಕುಸಿದಿದ್ದರಿಂದ ಕನಿಷ್ಠ 79 ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಸುಮಾರು 160ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಷ್ಠಿತ ನೈಟ್ ಕ್ಲಬ್ ನಲ್ಲಿ ನಡೆಯುತ್ತಿದ್ದ ಮೆರೆಂಗ್ಯೂ ಸಂಗೀತ ಕಚೇರಿಯಲ್ಲಿ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಇತರರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
ಸ್ಯಾಂಟೊ ಡೊಮಿಂಗೊದಲ್ಲಿನ ಒಂದು ಅಂತಸ್ತಿನ ಜೆಟ್ ಸೆಟ್ ನೈಟ್‌ಕ್ಲಬ್‌ನ ಅವಶೇಷಗಳಡಿಯಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತುರ್ತು ಕಾರ್ಯಾಚರಣೆಗಳ ನಿರ್ದೇಶಕ ಜುವಾನ್ ಮ್ಯಾನುಯೆಲ್ ಮೆಂಡೆಜ್ ಹೇಳಿದ್ದಾರೆ. ನಾವು ಅವಶೇಷಗಳನ್ನು ತೆರವುಗೊಳಿಸುವುದರ ಜತೆಗೆ ಅದರಲ್ಲಿ ಸಿಲುಕಿಕೊಂಡವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದಿದ್ದಾರೆ.
ನೈಟ್‌ಕ್ಲಬ್‌ನ ಛಾವಣಿ ಕುಸಿದು ಸುಮಾರು 12 ಗಂಟೆಗಳ ನಂತರ ರಕ್ಷಣಾ ಸಿಬ್ಬಂದಿಗಳು ಅವಶೇಷಗಳಡಿಯಿಂದ ಬದುಕುಳಿದವರನ್ನು ಹೊರತೆಗೆಯುತ್ತಿದ್ದಾರೆ. ಅಗ್ನಿಶಾಮಕ ದಳದವರು ಮುರಿದ ಕಾಂಕ್ರೀಟ್‌ನ ಬ್ಲಾಕ್‌ಗಳನ್ನು ತೆಗೆದು ಹಾಕುತ್ತಿದ್ದಾರೆ. ರಕ್ಷಣಾ ಸಿಬ್ಬಂದಿ ಕ್ಲಬ್‌ನಲ್ಲಿನ ಮೂರು ಪ್ರದೇಶಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಮೆಂಡೆಜ್ ಮಾಹಿತಿ ನೀಡಿದ್ದಾರೆ. ಅವಶೇಷಗಳ ಅಡಿ ಸಿಲುಕಿದವರ ಆರ್ತನಾದ ಹೊರ ಬರುತ್ತಿದ್ದು, ಕಾಪಾಡಿ ಕಾಪಾಡಿ ಎಂಬ ಶಬ್ಧ ಕೇಳಿ ಬರುತ್ತಿದೆ ಎಂದು ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ವರದಿಯಾಗಿದೆ.