ಹೊಸದಿಗಂತ ಡಿಜಿಟಲ್ ಡೆಸ್ಕ್:
ಬದುಕಿನಲ್ಲಿ ಒದಗಬಹುದಾದ ಅವಕಾಶಗಳನ್ನು ಸದ್ವಿನಿಯೋಗಪಡಿಸಿಕೊಂಡಾಗ ಯಶಸ್ಸು ಬೆನ್ನತ್ತಿ ಬರುತ್ತದೆ ಎಂಬುದನ್ನು ಮನದಲ್ಲಿ ಗಟ್ಟಿಮಾಡಿಕೊಂಡು ಮುನ್ನುಗ್ಗಬೇಕು ಎಂದು ಡಯಟ್ ಮಾಯಿಪ್ಪಾಡಿಯ ಪ್ರಾಂಶುಪಾಲ ಡಾ. ರಘುರಾಮ ಭಟ್ ಹೇಳಿದರು.
ಬುಧವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಸಮ್ಮರ್ ಕ್ಯಾಂಪ್‌ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸನಿಹದ ಶಾಲೆಗಳ ವಿದ್ಯಾರ್ಥಿಗಳನ್ನು ಜೋಡಿಸಿ ಅವರಿಗೂ ಹೊಸ ತಂತ್ರಜ್ಞಾನದ ಅನುಭವದ ಅರಿವನ್ನು ಸ್ವಯಂ ಅವರೇ ಕಂಡುಕೊಳ್ಳುವಂತೆ ಯೋಜಿಸಿದ ಶಿಬಿರ ಶ್ಲಾಘನೀಯ. ಉತ್ತಮ ವ್ಯವಸ್ಥೆಗಳೊಂದಿಗಿನ ಅನುಭವೀ ಮಾರ್ಗದರ್ಶಕರ ನೇತೃತ್ವದಲ್ಲಿ ಶಿಬಿರದ ಮಕ್ಕಳು ತಂತ್ರಜ್ಞಾನದ ಪ್ರಬೋಧನೆಯನ್ನು ಪಡೆದುಕೊಂಡಿರುವುದು ಅವರ ಮಾತಿನಲ್ಲಿ ವ್ಯಕ್ತವಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಹಾಗೂ ಶಾಲೆಗೆ ಶಾಶ್ವತ ಫಲಕವನ್ನೂ ನೀಡಲಾಯಿತು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ, ಸ್ಟೆಮ್ ರೋಬೋ ಸಂಸ್ಥೆಯ ಆಡಳಿತ ನಿರ್ದೇಶಕ ಸೌರಭ್ ಶೆಟ್ಟಿ ಶುಭಹಾರೈಸಿದರು.
ಕಾರ್ಯಾಗಾರದ ಮಾರ್ಗದರ್ಶಕರುಗಳಾದ ಸ್ಟೆಮ್‌ರೋಬೋ ಟೆಕ್ನೋಲಜೀಸ್‌ನ ಸರ್ವೇಶ್ವರ್ ಮುರುಡೇಶ್ವರ, ಕೃಷ್ಣಮೂರ್ತಿ ಪೆರ್ವ, ಅಂಕಿತ್ ಶೆಟ್ಟಿ ಗೋಸಾಡ ಇವರನ್ನು ಅಭಿನಂದಿಸಲಾಯಿತು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಶಿಬಿರ ನೇತೃತ್ವ ವಹಿಸಿದ್ದರು. ೯ನೇ ತರಗತಿಯ ಶ್ರೀಕೃಷ್ಣ ಸ್ವಾಗತಿಸಿ ಧರಣಿ ಸರಳಿ ವಂದಿಸಿದರು.