ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವೈಯಕ್ತಿಕ ಟೀಕೆಗಳಿಗೆ ಬಳಸಬಾರದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕುನಾಲ್ ಕಾಮ್ರಾ ಅವರ ‘ಗದ್ದಾರ್’ ಜೋಕ್ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಎನ್‌ಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್,’ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶವನ್ನು ಒಡೆಯಲು ಮತ್ತು ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸಲು ಕೆಲವರು ಬಳಸುತ್ತಿದ್ದಾರೆ. ಇದು ಅವರ ಜನ್ಮಸಿದ್ಧ ಹಕ್ಕು ಎಂದು ಅವರು ಭಾವಿಸಿದ್ದಾರೆ’ ಎಂದು ಟೀಕಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ದಾಳಿ ಮಾಡುವುದನ್ನು ಖಂಡಿತ ಸಹಿಸುವುದಿಲ್ಲ ಎಂದು ಪರೋಕ್ಷವಾಗಿ ಕುನಾಲ್ ಕಾಮ್ರಾ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು.
ಪ್ರತಿಯೊಬ್ಬರಿಗೂ ರಾಜಕೀಯ ನಾಯಕರನ್ನು ಪ್ರಶ್ನಿಸುವ, ಅವರನ್ನು ಟೀಕಿಸುವ ಹಕ್ಕು ಇದೆ. ಆದರೆ ಈ ಹಕ್ಕನ್ನು ದುರ್ಬಳಕೆ ಮಾಡಿಕೊಂಡು, ವೈಯಕ್ತಿಕ ಮಟ್ಟದಲ್ಲಿ ಟೀಕೆ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಸ್ಯ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದಾದರೆ, ಅಪಹಾಸ್ಯವನ್ನು ಏನೆಂದು ಕರೆಯಬೇಕು ಎಂದು ಯೋಗಿ ಪ್ರಶ್ನಿಸಿದ್ದಾರೆ.