April 7, 2026
Tuesday, April 7, 2026
spot_img

ಪಂಚಮಸಾಲಿ ಶ್ರೀಗಳ ಮೇಲೆ ಹಲ್ಲೆ, ಬ್ಲ್ಯಾಕ್‌ಮೇಲ್ ಯತ್ನ: ನಾಲ್ವರ ವಿರುದ್ಧ FIR ದಾಖಲು

ಹೊಸದಿಗಂತ ವಿಜಯಪುರ:

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕಾಗಿ ಪೀಡಿಸಿರುವ ಮತ್ತು ಅವರ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು ಮೂಲದ ತ್ರಿವೇಣಿ ಎಂಬಾಕೆ ಕಳೆದ ಎರಡ್ಮೂರು ವರ್ಷಗಳ ಹಿಂದೆ ‘ಆಶ್ರಿತ (ಪ್ರಗತಿ) ಫೌಂಡೇಷನ್’ ಹೆಸರಿನಲ್ಲಿ ಶ್ರೀಗಳನ್ನು ಭೇಟಿಯಾಗಿದ್ದಳು. ಸಮಾಜಸೇವೆ ಮತ್ತು ಪಂಚಮಸಾಲಿ ಹೋರಾಟಕ್ಕೆ ಸಾಥ್ ನೀಡುವುದಾಗಿ ನಂಬಿಸಿದ್ದ ಈಕೆ, ನಂತರ ತನ್ನ ಫೌಂಡೇಷನ್‌ಗೆ ಹಣ ನೀಡುವಂತೆ ಶ್ರೀಗಳಿಗೆ ಪೀಡಿಸಲು ಶುರು ಮಾಡಿದ್ದಳು. ಶ್ರೀಗಳು ಹಣ ನೀಡಲು ನಿರಾಕರಿಸಿದಾಗ ರಾಜಕೀಯ ವ್ಯಕ್ತಿಗಳ ಪಿತೂರಿಯೊಂದಿಗೆ ಸೇರಿ ಅವರ ತೇಜೋವಧೆ ಮಾಡಲು ಸಂಚು ರೂಪಿಸಿದ್ದಾಳೆ ಎನ್ನಲಾಗಿದೆ.

ಫೆಬ್ರವರಿ 11ರಂದು ಸ್ವಾಮೀಜಿಯವರು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ತೆರಳುತ್ತಿದ್ದಾಗ, ತ್ರಿವೇಣಿ ಮತ್ತು ಆಕೆಯ ತಂಡ ವಾಹನವನ್ನು ಅಡ್ಡಗಟ್ಟಿ ಹಣಕ್ಕಾಗಿ ಬೇಡಿಕೆಯಿಟ್ಟು, ಕಾರಿನ ಗ್ಲಾಸಿಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗಳ ಬೆಂಗಾವಲು ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.

ಆರೋಪಿ ತ್ರಿವೇಣಿ, ಶ್ರೀಗಳ ಶಿಷ್ಯ ರಾಜಕುಮಾರ್ ಸಿ.ಎಂ. ಎಂಬುವವರ ಮೊಬೈಲ್‌ಗೆ ಕರೆ ಮಾಡಿ 3 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾಳೆ. ಹಣ ನೀಡದಿದ್ದರೆ ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುವುದಾಗಿ ಹಾಗೂ ಅತ್ಯಾಚಾರದ ಸುಳ್ಳು ಕೇಸ್ ದಾಖಲಿಸುವುದಾಗಿ ಹೆದರಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ಶ್ರೀಗಳ ವಿರುದ್ಧ ಕೆಲವು ಮಾಧ್ಯಮಗಳಲ್ಲಿ ಬಂದಿದ್ದ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ. ಆದರೂ ಆರೋಪಿಗಳು ತಮ್ಮ ಕೃತ್ಯ ಮುಂದುವರಿಸಿದ ಹಿನ್ನೆಲೆಯಲ್ಲಿ, ಶ್ರೀಗಳು ಈಗ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಶ್ರೀಗಳು ನೀಡಿದ ದೂರಿನ ಅನ್ವಯ ಬೆಂಗಳೂರು ಮೂಲದ ತ್ರಿವೇಣಿ, ಪೃತ್ವಿಗೌಡ, ಯಶವಂತ ಮತ್ತು ಎಂ.ಡಿ. ವಿರೇಶ ಎಂಬ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !