April 28, 2026
Tuesday, April 28, 2026
spot_img

ನಿಮ್ಮ ನೀರಿನ ಬಿಲ್ ಬಾಕಿ ಇದೆಯೇ? ಚಿಂತಿಸಬೇಡಿ, BWSSB ತಂದಿದೆ ‘ಒನ್ ಟೈಮ್ ಸೆಟಲ್‌ಮೆಂಟ್’ ಭಾಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ನಿವಾಸಿಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ದೀರ್ಘಕಾಲದಿಂದ ನೀರಿನ ಬಿಲ್ ಪಾವತಿಸದ ಗ್ರಾಹಕರಿಗೆ ನೆರವಾಗಲು ಮೂರು ತಿಂಗಳ ಅವಧಿಯ ‘ಒನ್ ಟೈಮ್ ಸೆಟಲ್‌ಮೆಂಟ್’ ಯೋಜನೆಯನ್ನು ಜಾರಿಗೆ ತಂದಿದೆ.

ಫೆಬ್ರವರಿ ಅಂತ್ಯದ ವೇಳೆಗೆ ನಗರದಲ್ಲಿ ಒಟ್ಟು 851.33 ಕೋಟಿ ರೂಪಾಯಿ ನೀರಿನ ಬಿಲ್ ಬಾಕಿಯಿದೆ. ಇದರಲ್ಲಿ 539.43 ಕೋಟಿ ರೂ. ಅಸಲು ಹಣವಾದರೆ, ಬರೋಬ್ಬರಿ 311.90 ಕೋಟಿ ರೂಪಾಯಿ ಬಡ್ಡಿ ಸೇರಿದೆ. ಈ ಯೋಜನೆಯಡಿ ಬಾಕಿ ಉಳಿಸಿಕೊಂಡವರು ಬಡ್ಡಿಯಲ್ಲಿ ರಿಯಾಯಿತಿ ಪಡೆಯುವ ಸಾಧ್ಯತೆಯಿದೆ.

ಈ ಅದೃಷ್ಟದ ಅವಕಾಶ ಏಪ್ರಿಲ್‌ನಿಂದ ಜೂನ್‌ವರೆಗೆ ಮಾತ್ರ ಲಭ್ಯವಿರಲಿದೆ. ಮಂಡಳಿಯ 11 ಲಕ್ಷ ಸಂಪರ್ಕಗಳ ಪೈಕಿ ಸುಮಾರು 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದು, ಇವರೆಲ್ಲರಿಗೂ ಈ ಯೋಜನೆಯ ಲಾಭ ಸಿಗಲಿದೆ.

BWSSB ಅಧ್ಯಕ್ಷರಾದ ರಾಮ ಪ್ರಸಾತ್ ಮನೋಹರ್ ಅವರ ಪ್ರಕಾರ, ಅರ್ಹ ಗ್ರಾಹಕರಿಗೆ ಈ ತಿಂಗಳ ನೀರಿನ ಬಿಲ್ ಜೊತೆಗೆ ವಿಶೇಷ OTS ನೋಟಿಸ್ ನೀಡಲಾಗುವುದು. ಈ ಪತ್ರದಲ್ಲಿ ನಿಮ್ಮ ಒಟ್ಟು ಬಾಕಿ ಎಷ್ಟು? ಎಷ್ಟು ಬಡ್ಡಿ ಮನ್ನಾ ಆಗಲಿದೆ? ಅಂತಿಮವಾಗಿ ನೀವು ಎಷ್ಟು ಹಣ ಪಾವತಿಸಬೇಕು ಎಂಬ ಸಂಪೂರ್ಣ ವಿವರ ಇರಲಿದೆ.

ಬಾಕಿ ಮೊತ್ತವನ್ನು ಸುಲಭವಾಗಿ ತೀರಿಸಲು ಮತ್ತು ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ಮಂಡಳಿಯು ಈ ವಿಶೇಷ ಅವಕಾಶ ನೀಡಿದೆ. ದೀರ್ಘಕಾಲದ ಬಾಕಿದಾರರು ತಕ್ಷಣವೇ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕೆಂದು ಅಧ್ಯಕ್ಷರು ಕೋರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !