ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಅಮೃತ್‌ಸರ್-ಬಟಿಂಡಾ ಹೆದ್ದಾರಿಯ ತರ್ನ್ ತರನ್ ಜಿಲ್ಲೆಯ ಸರ್ಹಾಲಿ ಪೊಲೀಸ್ ಠಾಣೆ ಮೇಲೆ ನಿನ್ನೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆದಿದೆ.
ಈ ದಾಳಿಯ ಹೊಣೆಯನ್ನು ಖಲಿಸ್ತಾನಿ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಖಲಿಸ್ತಾನಿ ಟೆರರ್ ಗ್ರೂಪ್ ಸಿಖ್ಸ್ ಫಾರ್ ಜಸ್ಟಿಸ್ ಹೊಣೆ ಹೊತ್ತಿದ್ದು, ದಾಳಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟಾರೆ ಏಳು ಶಂಕಿತರನ್ನು ಬಂಧಿಸಲಾಗಿದೆ. ದಾಳಿಯಿಂದಾಗಿ ಠಾಣೆಯ ಬಾಗಿಲು, ಗೋಡೆ, ಗ್ಲಾಸ್‌ಗಳು ಒಡೆದಿತ್ತು. ರಾಕೆಟ್ ಲಾಂಚರ್ ಮಾದರಿಯ ಆಯುಧವು ಮೊದಲು ಪಿಲ್ಲರ್‌ಗೆ ಬಡಿದು ನಂತರ ಪೊಲೀಸ್ ಠಾಣೆಗೆ ಅಪ್ಪಳಿಸಿತು ಎಂದು ಮೂಲಗಳು ತಿಳಿಸಿವೆ.
ಸರ್ಹಾಲಿಯು ಪಾಕಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ ಎಂದು ನಂಬಲಾದ ಖಲಿಸ್ತಾನಿ ಭಯೋತ್ಪಾದಕ ಹರ್ವಿಂದರ್ ಸಿಂಗ್ ರಿಂಡಾ ಅವರ ಸ್ಥಳೀಯ ಪ್ರದೇಶವಾಗಿದೆ. ನಿಷೇಧಿತ ಖಲಿಸ್ತಾನಿ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ನ ಸದಸ್ಯರಾಗಿರುವ ರಿಂಡಾ ಈ ವರ್ಷದ ಮೇ ತಿಂಗಳಲ್ಲಿ ಪಂಜಾಬ್ ಪೊಲೀಸ್ ಗುಪ್ತಚರ ಕೇಂದ್ರ ಕಚೇರಿ ಮೇಲೆ ನಡೆದ ಆರ್‌ಪಿಜಿ ದಾಳಿ ಸೇರಿದಂತೆ ವಿವಿಧ ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.