ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಗೆ ಸಹಕಾರ ನೀಡಿದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಿಯಾಸಿಯ ಹಿರಿಯ ಪೊಲೀಸ್ ಅಧೀಕ್ಷಕ ಮೋಹಿತಾ ಶರ್ಮಾ ಅವರು, ರಿಯಾಸಿ ಭಯೋತ್ಪಾದನಾ ದಾಳಿಯಲ್ಲಿ ಒರ್ವನನ್ನು ಬಂಧಿಸಲಾಗಿದೆ. ಈತ ಕೃತ್ಯದ ಮಾಸ್ಟರ್ ಮೈಂಡ್ ವ್ಯಕ್ತಿಯಲ್ಲ. ಆದರೆ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಹಕೀಮ್ ದಿನ್ ರಾಜೌರಿ ನಿವಾಸಿಯಾಗಿದ್ದು ಭಯೋತ್ಪಾದಕರಿಗೆ ದಾಳಿ ನಡೆಸಲು ಸಾಮಾಗ್ರಿಗಳನ್ನು ಒದಗಿಸಿದ ಆರೋಪ ಕೇಳಿ ಬಂದಿದೆ.
ಮಾತಾ ವೈಷ್ಣೋದೇವಿ ದೇಗುಲಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಜೂನ್ 9 ರಂದು ದಾಳಿ ನಡೆದಿತ್ತು. ಈ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿ 41 ಮಂದಿ ಗಾಯಗೊಂಡಿದ್ದರು.
ದಾಳಿಯ ತನಿಖೆಗೆ ಸಂಬಂಧಿಸಿದಂತೆ ಸುಮಾರು 50 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಕೇಂದ್ರ ಗೃಹ ಸಚಿವಾಲಯವು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವರ್ಗಾಯಿಸಿದೆ.ಪೊಲೀಸರು ಶಂಕಿತ ವ್ಯಕ್ತಿಗಳ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಭಾಗಿಯಾಗಿರುವವರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಲಾಗಿದೆ.