ಕೊಡಗು ಜಿಲ್ಲಾಡಳಿತದಿಂದ ಹಿಂದೂ ಕಾರ್ಯಕರ್ತರ ಧೈರ್ಯ ಕುಗ್ಗಿಸುವ ಯತ್ನ: ವಿಹಿಂಪ ಆಕ್ರೋಶ

ಹೊಸದಿಗಂತ ವರದಿ ಮಡಿಕೇರಿ:

ಹಿಂದೂ ಯುವ ವಾಹಿನಿಯ ಕೊಡಗು ಜಿಲ್ಲಾ ಸಂಚಾಲಕ್ ವಿನಯ್ ಹಾಗೂ ಮಡಿಕೇರಿ ಬಿ.ಜೆ.ಪಿ. ನಗರ ಸಭಾ ಸದಸ್ಯ ಕವನ್ ಕಾವೇರಪ್ಪ ಇವರುಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಸಂಬಂಧ ಕಾರಣ ಕೇಳಿ ನೋಟೀಸ್ ಜಾರಿ ಮಾಡಿರುವ ಜಿಲ್ಲಾಡಳಿತದ ಕ್ರಮಕ್ಕೆ ಕೊಡಗು ಜಿಲ್ಲಾ ವಿಶ್ವಹಿಂದೂ ಪರಿಷದ್ ಹಾಗೂ ಸಹ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಈ‌ ಇಬ್ಬರನ್ನು ಗಡಿಪಾರು ಮಾಡಲು ಸೂಚಿಸಿ ಜಿಲ್ಲಾಡಳಿತ ಉಪ ವಿಭಾಗಾಧಿಕಾರಿ ಮೂಲಕ ಕಾರಣ ಕೇಳಿ ನೋಟೀಸ್ ಜಾರಿ ಮಾಡಿರುವುದು ಅಕ್ಷಮ್ಯ. ಇದು ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಧೈರ್ಯ ಕುಗ್ಗಿಸುವ ಯತ್ನ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ, ವಕೀಲ ಕೃಷ್ಣಮೂರ್ತಿ ಅವರು ಟೀಕಿಸಿದ್ದಾರೆ.

ಜಿಲ್ಲೆಯಲ್ಲಿ ಮತಾಂಧರು ಗೋಹತ್ಯೆ, ಲವ್ ಜಿಹಾದ್, ಮಾದಕ ವಸ್ತುಗಳ ಸಾಗಣೆ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಧರ್ಮ ಹಾಗೂ ದೇವರ ಕುರಿತಾದ ಅಸಭ್ಯ ಹೇಳಿಕೆಗಳು, ಭಯೋತ್ಪಾದನೆ ಹೀಗೆ ಹಲವಾರು ಸಮಾಜಘಾತುಕ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು ಕೇಂದ್ರ ಸರ್ಕಾರದ ಎನ್ಐಎ ತಂಡ ಭಯೋತ್ಪಾದಕರ ಹೆಡೆಮುರಿ ಕಟ್ಟುತ್ತಿದೆ. ಆದರೆ ಕೊಡಗು ಜಿಲ್ಲಾಡಳಿತವು ರಾಷ್ಟ್ರದ ರಕ್ಷಣೆಗೆ ನಿಂತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಗಡಿಪಾರು ಹೆಸರಿನಲ್ಲಿ ಬೆದರಿಸುವ ಪ್ರಯತ್ನ ನಡೆಸುತ್ತಿರುವುದು ಶೋಚನೀಯವಾಗಿದೆ ಎಂದು ಕಟುವಾಗಿ ಆಕ್ಷೇಪಿಸಿದ್ದಾರೆ.

ಜಿಲ್ಲಾಡಳಿತದಿಂದ ಹಿಂದುತ್ವ ಹಾಗೂ ಧರ್ಮ ರಕ್ಷಣೆಗೆ ಹೋರಾಡುತ್ತಿರುವ ಕಾರ್ಯಕರ್ತರ ಧೈರ್ಯ ಕುಗ್ಗಿಸುವ ಯತ್ನ ಖಂಡನೀಯ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಗಡಿಪಾರು ಆದೇಶವನ್ನು ಇಲ್ಲಿಗೆ ಮೊಟಕು ಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಹಾಗೂ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಕೃಷ್ಣಮೂರ್ತಿ ಅವರು ಎಚ್ಚರಿಸಿದ್ದಾರೆ. ಅವರ ಈ ಹೇಳಿಕೆಗೆ ಭಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿ ಸೇರಿದಂತೆ ವಿಹಿಂಪದ ಸಹ ಸಂಘಟನೆಗಳೂ ಧ್ವನಿಗೂಡಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!