ಪ್ರಕರಣಗಳನ್ನು ಮುಚ್ಚಿ ಹಾಕಲು ರಾಜ್ಯ ಸರಕಾರದಿಂದ ಯತ್ನ: ಭಾಸ್ಕರ್‌ ರಾವ್ ಕಿಡಿ

ಹೊಸ ದಿಗಂತ ವರದಿ,ಮೈಸೂರು:

ರಾಜ್ಯದಲ್ಲಿ ನಡೆದಿರುವ ಗುತ್ತಿಗೆದಾರರು, ಅಧಿಕಾರಿಗಳ ಆತ್ಮಹತ್ಯೆ ಪ್ರಕರಣ, ಹಗರಣ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಆ ಮೂಲಕ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಬಿಜೆಪಿ ಮುಖಂಡರಾದ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಆರೋಪಿಸಿದರು.

ಶನಿವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮೊದಲೆಲ್ಲಾ ಸರ್ಕಾರಿ ಅಧಿಕಾರಿಗಳು ಹಲವು ಕಾರಣಗಳಿಂದಾಗಿ ಸಸ್ಪೆಂಡ್ ಆಗುತ್ತಿದ್ದರು. ಆದರೆ ಈಗ ಕಿರುಕುಳ, ಒತ್ತಡ ತಾಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಚಿವರ ಆಪ್ತ ಸಹಾಯಕರ ಲಂಚಬಾಕತನದ ಒತ್ತಡದಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಿಪಕ್ಷಗಳು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸುತ್ತಿದೆ. ಆದರೆ ಯಾವುದೇ ಪ್ರಕರಣ ನಡೆದರೂ ತನಿಖೆ ನಡೆಸಿ, ೯೦ ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು. ಆದರೆ ಈ ರೀತಿ ಯಾವುದೂ ಆಗುತ್ತಿಲ್ಲ, ಪ್ರಕರಣ ತನಿಖೆಯನ್ನೇ ಇನ್ನೂ ಕೂಡ ಆರಂಭಿಸಿಲ್ಲ. ತನಿಖೆಯ ಪ್ರಗತಿ ಕೂಡ ಇಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ಹಣ, ಅಧಿಕಾರದ ಮದದಿಂದ ಆಡಳಿತವನ್ನು ನಡೆಸುತ್ತಿದೆ. ಜನರು ಬಹುಮತ ಕೊಟ್ಟಿರುವುದನ್ನು ದುರುಪಯೋಗಪಡಿಸಿಕೊಂಡು, ದರ್ಪದಿಂದ ಅಧಿಕಾರ ನಡೆಸುತ್ತಿದೆ. ಏನೇ ಆದರೂ ಯಾರೂ ನಮ್ಮನ್ನು ಪ್ರಶ್ನಿಸಬಾರದು ಎಂಬoತೆ ನಡೆದುಕೊಳ್ಳುತ್ತಿದೆ. ಗಂಭೀರ ಪ್ರಕರಣದ ಆರೋಪಗಳಿಗೆ ಹಾಸ್ಯ ಹಾಗೂ ಉಡಾಫೆಯಿಂದ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಿದ್ದಾರೆ. ಎಲ್ಲಾ ಕಡೆ ಕಮಿಷನ್ ದಂಧೆ ವಿಪರೀತವಾಗಿ ನಡೆಯುತ್ತಿದೆ. ಗೃಹ ಸಚಿವರನ್ನು ಮೂಲೆ ಗುಂಪು ಮಾಡಲಾಗಿದೆ. ಅವರಿಗೆ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಅಪರಾಧಗಳ ಮೇಲೆ ಅಪರಾಧ ನಡೆಯುತ್ತಿದ್ದರೂ, ಅವುಗಳನ್ನು ಗೃಹ ಸಚಿವರು ಲಘುವಾಗಿ ಪರಿಗಣಿಸಿ, ಸಣ್ಣ ಘಟನೆಗಳು ಎಂದು ಹೇಳಿಕೆ ನೀಡುತ್ತಿದ್ದಾರೆ. ದೇಶದ್ರೋಹಿಗಳ ಮೇಲಿನ ಕೇಸ್‌ನ್ನು ಸರ್ಕಾರ ವಾಪಾಸ್ ತೆಗೆದುಕೊಂಡಿರುವುದರಿoದ ಅವರುಗಳು ನಮ್ಮದೇ ಸರ್ಕಾರವಿದೆ, ನಾವು ಏನೇ ಮಾಡಿದರೂ ನಡೆಯುತ್ತಿದೆ ಎಂಬoತೆ ಕೃತ್ಯಗಳನ್ನು ಎಸಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಕಣ್ಣಿಗೆ ಕಾಣುತ್ತಿರುವ ಮಿತಿ ಮೀರಿದ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಲ್ಬುರ್ಗಿ ರಿಪಬ್ಲಿಕ್ ಆಗಿದೆ. ಪ್ರಿಯಾಂಕ ಖರ್ಗೆಯವರ ಭ್ರಷ್ಟಾಚಾರ, ಬೆಂಬಲಿಗರ ಆರ್ಭಟ ಮಿತಿ ಮೀರಿದೆ. ಹಾಗಾಗಿ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ವಕ್ತಾರ ಎಂ.ಜಿ.ಮಹೇಶ್, ಪ್ರಧಾನ ಕಾರ್ಯದರ್ಶಿಗಳಾದ ಕೇಬಲ್ ಮಹೇಶ್, ರಘು, ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!