ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ತಿರುಪರನಕುಂದ್ರಂ ಬೆಟ್ಟದಲ್ಲಿ ದರ್ಗಾದ ಬಳಿ ಇರುವ ಕಲ್ಲಿನ ಕಂಬದ ಮೇಲೆ ಸಾಂಪ್ರದಾಯಿಕ ದೀಪ ಬೆಳಗಲು ಅನುಮತಿ ನೀಡಿದ್ದ ನ್ಯಾಯಾಧೀಶ ಜಿ. ಆರ್ ಸ್ವಾಮಿನಾಥನ್ ಅವರನ್ನು ಮಹಾಭಿಯೋಗ ಪ್ರಸ್ತಾವನೆ ಮೂಲಕ ತೆಗೆದುಹಾಕಲು ವಿರೋಧ ಪಕ್ಷ ಪ್ರಯತ್ನಿಸುತ್ತಿದೆ.
ಆದ್ರೆ ಕೇಂದ್ರ ಸರಕಾರ ಈ ನಡೆಯನ್ನು ಖಂಡಿಸಿದೆ. ಇದೀಗ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಧೀಶರು ಸೇರಿದಂತೆ 56 ಮಾಜಿ ನ್ಯಾಯಮೂರ್ತಿಗಳು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರನ್ನು ಬೆಂಬಲಿಸಿ ಪತ್ರ ಬರೆದಿದ್ದಾರೆ.
ಇಂಡಿ ಕೂಟದ ಮಹಾಭಿಯೋಗ ಪ್ರಸ್ತಾವನೆಗೆ 56 ನ್ಯಾಯಾಧೀಶರು ಗಂಭೀರ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಮುಂದುವರಿಸಲು ಬಿಟ್ಟರೆ. ಅದು ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು ನಾಶಪಡಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಸಮಾಜದ ಒಂದು ನಿರ್ದಿಷ್ಟ ವರ್ಗದ ಸೈದ್ಧಾಂತಿಕ ಮತ್ತು ರಾಜಕೀಯ ನಿರೀಕ್ಷೆಗಳಿಗೆ ಅನುಗುಣವಾಗಿರದ ನ್ಯಾಯಾಧೀಶರನ್ನು ಬೆದರಿಸುವ ನಾಚಿಕೆಯಿಲ್ಲದ ಪ್ರಯತ್ನ ಎಂದು ಬಣ್ಣಿಸಿದ್ದಾರೆ. ನ್ಯಾಯಾಧೀಶರು ತಮ್ಮ ಪತ್ರದಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಸಹ ಉಲ್ಲೇಖಿಸಿದ್ದಾರೆ.
ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿಯೂ ಸಹ ಆಗಿನ ಸರ್ಕಾರವು ‘ಅಧಿಕಾರವನ್ನು ಪಾಲಿಸಲು’ ನಿರಾಕರಿಸಿದ ನ್ಯಾಯಾಧೀಶರನ್ನು ಶಿಕ್ಷಿಸಲು ವಿವಿಧ ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಿತು. ಅವರ ಬಡ್ತಿಗಳನ್ನು ರದ್ದುಗೊಳಿಸುವುದು ಸೇರಿದಂತೆ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಪತ್ರದಲ್ಲಿ 1973ರ ಕೇಶವಾನಂದ ಭಾರತಿ ಪ್ರಕರಣ ಸೇರಿದಂತೆ ಮೂರು ಗಮನಾರ್ಹ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಕಾಂಗ್ರೆಸ್ ಸಂಸದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ 100ಕ್ಕೂ ಹೆಚ್ಚು ಇಂಡಿ ಕೂಟದ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಆದಾಗ್ಯೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ದೋಷಾರೋಪಣೆ ಪ್ರಯತ್ನವನ್ನು ಬಲವಾಗಿ ಟೀಕಿಸಿದರು. ವಿರೋಧ ಪಕ್ಷಗಳು ಓಲೈಕೆ ರಾಜಕೀಯವನ್ನು ನಡೆಸುತ್ತಿವೆ ಎಂದು ಆರೋಪಿಸಿದರು.

