ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಓಲಾ, ಊಬರ್, ರ್‍ಯಾಪಿಡೋ ಸೇವೆಗಳ ಬಳಕೆ ಹೆಚ್ಚಾಗಿದೆ. ಕೆಲವೇ ನಿಮಿಷಗಳಲ್ಲಿ ಬೈಕ್ ಅಥವಾ ಆಟೋ ಬಂದು ಮನೆಯಿಂದ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಆದರೆ ಈ ಸೌಲಭ್ಯವನ್ನೇ ಕೆಲವು ಚಾಲಕರು ವಂಚನೆಗಾಗಿ ಬಳಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂತಹುದೇ ಘಟನೆಯೊಂದು ನಡೆದಿದೆ.
ವರದಿಗಳ ಪ್ರಕಾರ, ಯುವತಿಯೊಬ್ಬಳು 296 ರೂಪಾಯಿಗೆ ರ್‍ಯಾಪಿಡೋ ಆಟೋ ಬುಕ್ ಮಾಡಿದ್ದಳು. ಆದರೆ ಇಳಿಯುವಾಗ ಚಾಲಕ 390 ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಕಾರಣ ಕೇಳಿದಾಗ, ಚಾಲಕ ಕನ್ನಡ ಭಾಷೆಯನ್ನು ನೆಪ ಮಾಡಿ ವಿವಾದದ ದಿಕ್ಕು ತಿರುಗಿಸಲು ಯತ್ನಿಸಿದ್ದಾನೆ. ಯುವತಿ ತಕ್ಷಣ ರ್‍ಯಾಪಿಡೋ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದೆ.
ಈ ಆಟೋ ಚಾಲಕ ಹೊರ ರಾಜ್ಯದಿಂದ ಬಂದವರಿಗೆ ಅಥವಾ ಕನ್ನಡ ಬಾರದವರಿಗೆ ಹೆಚ್ಚು ಹಣ ಪೀಕಲು ಇಂಥ ತಂತ್ರ ಬಳಸುತ್ತಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಓಲಾ, ಊಬರ್, ರ್‍ಯಾಪಿಡೋ ಸೇವೆ ಬಳಸುವಾಗ ಚಾಲಕರ ವಿವರ, ಬಿಲ್ ದರ ಮತ್ತು ಸಂಭಾಷಣೆಯ ಬಗ್ಗೆ ಎಚ್ಚರಿಕೆಯಿಂದಿರಬೇಕು.