ಹೊಸದಿಗಂತ ವರದಿ ಕೊಡಗು:
ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ಹಾಗೂ ಗಾಂಜಾ ಗಿಡ ಬೆಳೆಸಿದ್ದ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮೂರ್ನಾಡು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಪಂಚವಳ್ಳಿ ನಿವಾಸಿ ಸದ್ದಾಂ ಹುಸೇನ್ (35) ಹಾಗೂ ಜಬೀವುಲ್ಲಾಖಾನ್ (40) ಬಂಧಿತ ಆರೋಪಿಗಳಾಗಿದ್ದು, ಇವರಿಂದ 241.4 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಂದೆಡೆ ಗೋಣಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಮಾಯಮುಡಿ ಗ್ರಾಮದ ದಾಸ ಕಾಲೋನಿಯ ಮನೆಯ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಸುಜಯ್ (29) ಎಂಬಾತನನ್ನು 49 ಗ್ರಾಂ.ತೂಕದ ಹಸಿ ಗಾಂಜಾ ಗಿಡಗಳೊಂದಿಗೆ ಬಂಧಿಸಲಾಗಿದೆ.
ಮೂರ್ನಾಡುವಿನಿಂದ ಕೊಂಡಂಗೇರಿ ಹೋಗುವ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಡಿಕೇರಿ ಉಪ ವಿಭಾಗ ಡಿವೈಎಸ್ ಪಿ ಎಂ.ಜಗದೀಶ್, ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್.ಯು. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದರು.
ಮತ್ತೊಂದೆಡೆ ಮಾಯಮುಡಿ ಗ್ರಾಮದ ಮನೆಯಲ್ಲಿ ನಿಷೇಧಿತ ಮಾದಕ ಪದಾರ್ಥವಾದ ಗಾಂಜಾ ಗಿಡಗಳನ್ನು ಬೆಳೆಸಿರುವ ಕುರಿತ ಖಚಿತ ಮಾಹಿತಿ ಹಿನ್ನಲೆಯಲ್ಲಿ ವೀರಾಜಪೇಟೆ ಡಿವೈಎಸ್ ಪಿ ಆರ್. ಮೋಹನ್ ಕುಮಾರ್, ಗೋಣಿಕೊಪ್ಪ ವೃತ್ತದ ಇನ್ಸ್ಪೆಕ್ಟರ್ ಗೋವಿಂದರಾಜು, ಗೋಣಿಕೊಪ್ಪ ಠಾಣಾಧಿಕಾರಿ ಕೆ.ಪಿ.ದೀಕ್ಷಿತ್ ಕುಮಾರ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ಸುಜಯ್‌ನನ್ನು ಬಂಧಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.