April 4, 2026
Saturday, April 4, 2026
spot_img

ಎಲೆಕ್ಷನ್ ಪ್ರಚಾರದ ವೇಳೆ ಕಾಂಗ್ರೆಸ್ ಮಾಜಿ ಸಂಸದ ಅಧೀರ್ ರಂಜನ್ ಚೌಧರಿ ಮೇಲೆ ಹಲ್ಲೆ ಯತ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಪ್ರಚಾರ ಜೋರಾಗಿರುವ ನಡುವೆಯೇ ಬೆರ್ಹಾಂಪೋರ್‌ನಲ್ಲಿ ರಾಜಕೀಯ ಉದ್ವಿಗ್ನತೆ ತಾರಕ್ಕೇರಿದೆ. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಂಸದ ಅಧೀರ್ ರಂಜನ್ ಚೌಧರಿ ಪ್ರಚಾರದ ವೇಳೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ವಾರ್ಡ್ ನಂ. 19ರಲ್ಲಿ ನಡೆದಿದ್ದು, ಕೆಲಕಾಲ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ವರದಿಗಳ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಧೀರ್ ರಂಜನ್ ಚೌಧರಿ ಶನಿವಾರ ಬೆಳಿಗ್ಗೆ ಬೆರ್ಹಾಂಪೋರ್ ಪುರಸಭೆಯ ವಾರ್ಡ್ 19ರಲ್ಲಿ ಮತದಾರರನ್ನು ಭೇಟಿ ಮಾಡಲು ತೆರಳಿದ ವೇಳೆ ಟಿಎಂಸಿ ಬೆಂಬಲಿಗರು ಈಗಾಗಲೇ ಅಲ್ಲಿ ಜಮಾಯಿಸಿದ್ದರು. ಅವರ ಆಗಮನದೊಂದಿಗೆ “ಗೋ ಬ್ಯಾಕ್” ಘೋಷಣೆಗಳು ಮೊಳಗಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಯಿತು.

ಕ್ಷಣಗಳಲ್ಲಿ ಈ ವಾಗ್ವಾದ ತಳ್ಳಾಟ–ನೂಕಾಟದ ಮಟ್ಟಕ್ಕೆ ತಲುಪಿದೆಯೆಂದು ತಿಳಿದುಬಂದಿದೆ. ಪರಿಸ್ಥಿತಿ ಕೈಮೀರಿದಂತೆ ಕಂಡಾಗ ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರ ಪಡೆಗಳು ತಕ್ಷಣ ಮಧ್ಯಪ್ರವೇಶಿಸಿ, ಅಧೀರ್ ಅವರನ್ನು ಪರ್ಯಾಯ ಮಾರ್ಗದ ಮೂಲಕ ಸುರಕ್ಷಿತವಾಗಿ ಸ್ಥಳದಿಂದ ಕರೆತಂದಿದ್ದಾರೆ. ನಂತರ ಅವರು ಮತ್ತೆ ತಮ್ಮ ಚುನಾವಣಾ ಪ್ರಚಾರವನ್ನು ಮುಂದುವರಿಸಿದರು.

ಇದನ್ನೂ ಓದಿ:

ಘಟನೆ ಕುರಿತು ಪ್ರತಿಕ್ರಿಯಿಸಿದ ಅಧೀರ್ ರಂಜನ್ ಚೌಧರಿ, ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಮುಂಚಿತವಾಗಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲ ದುಷ್ಕರ್ಮಿಗಳು ಶಸ್ತ್ರಗಳನ್ನು ಹೊಂದಿದ್ದರು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಇನ್ನೊಂದೆಡೆ, ತೃಣಮೂಲ ಕಾಂಗ್ರೆಸ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಕಾಂಗ್ರೆಸ್ ಕಾರ್ಯಕರ್ತರೇ ಗಲಾಟೆ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಪ್ರತಿಯುತ್ತರ ನೀಡಿದೆ. ಸ್ಥಳೀಯ ಟಿಎಂಸಿ ನಾಯಕರು, ಹೊರಗಿನವರನ್ನು ಕರೆತಂದು ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !