ಹೊಸದಿಗಂತ ವರದಿ,ಬೆಂಗಳೂರು:
ವನ್ಯಜೀವಿ ಜಿಂಕೆಗಳನ್ನು ಭೇಟೆಯಾಡಿ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಅಂತಾರಾಜ್ಯ ವ್ಯಕ್ತಿಗಳನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡ ಮೂಲದ ಶೇಕ್ ರೆಹಮತ್‌ವುಲ್ಲಾ(54) ಮತ್ತು ರಾಜಮಂಡ್ರಿಯ ಫಣೀಂದ್ರಚಾರಿ(44) ಬಂಧಿತರು. ಜಿಂಕೆ ಕೊಂಬುಗಳನ್ನು ಆರೋಪಿಗಳಿಗೆ ಮಾರಾಟ ಮಾಡಿದ್ದ ವ್ಯಕ್ತಿಯ ಪತ್ತೆಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳಿಬ್ಬರು ಆಂಧ್ರಪ್ರದೇಶದ ಗುಂಟೂರು ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬನಿಂದ ಜಿಂಕೆ ಕೊಂಬುಗಳನ್ನು ಕೊಂಡು ತಂದು ನಗರದ ಕಾಡುಗೋಡಿಯ ಬಸ್ ನಿಲ್ದಾಣದ ಬಳಿ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ಬಮದ ಖಚಿತ ಮಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಹಿತ ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ 20 ಲಕ್ಷ ರೂ ಮೌಲ್ಯದ ಜಿಂಕೆಯ ಕೊಂಬುಗಳನ್ನು ಮತ್ತು ತಲೆಬುರುಡೆ ಸಹಿತ ಇರುವ 6 ಜಿಂಕೆ ಕೊಂಬುಗಳು ಮತ್ತು ತಲೆಬುರುಡೆ ರಹಿತ ಇರುವ 33 ಜಿಂಕೆ ಕೊಂಬುಗಳು ಒಟ್ಟು 39 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.