ಹೊಸದಿಗಂತ ವರದಿ,ಮಂಗಳೂರು:
ಕೈಯಲ್ಲಿ ಪುಟ್ಟ ಕಂದಮ್ಮವನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬ ಗುರುಪುರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಭಾನುವಾರ ಮಧ್ಯಾಹ್ನ ಮಂಗಳೂರಿನ ಗುರುಪುರ ಸೇತುವೆಯಲ್ಲಿ ನಡೆದಿದೆ.
ಗುರುಪುರ ಮೂಳೂರು ಗ್ರಾಮದ ಮಟ್ಟಿಕುಳ ಎಂಬಲ್ಲಿನ ನಿವಾಸಿ ಸಂದೀಪ್(35) ಎಂಬಾತ ತನ್ನ ಮಗನೊಂದಿಗೆ ಗುರುಪುರ ಸೇತುವೆಯ ಬಳಿಗೆ ಬಂದು ಸೇತುವೆ ರಕ್ಷಣಾ ಗೋಡೆಯ ಕಂಬದ ಮೇಲೇರಿ `ನಾನು ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬೊಬ್ಬೆ ಹಾಕಿ ವಾಹನ ಸವಾರರಲ್ಲಿ ಗಾಬರಿ ಸೃಷ್ಠಿಸಿದ್ದ. ಇನ್ನೇನು ನದಿಗೆ ಹಾರಿಯೆ ಬಿಟ್ಟ ಎನ್ನುವಷ್ಟರಲ್ಲಿ ಸಂದೀಪ್ ಏಕಾಏಕಿ ನೇರವಾಗಿ ಸೇತುವೆ ರಸ್ತೆಗೆ ಹಾರಿದ. ಸ್ಥಳದಲ್ಲಿ ಜಮಾಯಿಸಿದ್ದ ಜನರು ಆತನನ್ನು ಹಿಡಿದು ಆತನಿಂದ ಮಗುವನ್ನು ಬೆರ್ಪಡಿಸಿ, ಆತನಿಗೆ ಸರಿಯಾಗಿ ಬಾರಿಸಿ ಬಜಪೆ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು.
ಮಂಗಳೂರಿನ ಬೆಂಗರೆಯಲ್ಲಿ ಮೀನಿನ ದೋಣಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಮದ್ಯ ವ್ಯಸನಿಯಾಗಿದ್ದು, ಸಂಶಯ ಪಿಶಾಚಿಯಾಗಿದ್ದ ಈತ ಪತ್ನಿಯ ಶೀಲದ ಮೇಲೂ ಶಂಕೆ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ.
ಎರಡು ಮಕ್ಕಳನ್ನು ಹೊಂದಿರುವ ಸಂದೀಪ್ ಕಳೆದ ಒಂದು ವಾರದಿಂದ ಮನೆಯಲ್ಲೇ ಇದ್ದ ಎನ್ನಲಾಗಿದ್ದು, ಭಾನುವಾರವೂ ಮಧ್ಯ ಸೇವಿಸಿ ಮಗುವಿನ ಜೊತೆ ಸೇತುವೆ ಬಳಿ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಈತನ ಈ ಹುಚ್ಚಾಟ ಸೇತುವೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರ ಎದೆ ಬಡಿತ ಕೆಲ ನಿಮಿಷ ನಿಲ್ಲುವಂತೆ ಮಾಡಿದ್ದು, ಇನ್ನೇನು ನದಿಗೆ ಹಾರುತ್ತಾನೆ ಎಂದು ಭೀತಿಯಿಂದ ಇದ್ದ ಜನ ಆತ ರಸ್ತೆಗೆ ಹಾರಿದಾಕ್ಷಣ ನಿಟ್ಟುಸಿರು ಬಿಡುವಂತಾಗಿತ್ತು.
ಮನೆಯವರು ಈವರೆಗೆ ದೂರು ಕೊಟ್ಟಿಲ್ಲ. ಆದರೆ ಮಾನಸಿಕ ಅಸ್ವಸ್ಥನಂತೆ ಕಾಣುವ ಸಂದೀಪನಿಗೆ ಮನೋ ಚಿಕಿತ್ಸೆ ನೀಡುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಬಜಪೆ ಪೊಲೀಸ್ ನಿರೀಕ್ಷಕ ಸಂದೀಪ್. ಜಿ. ಎಸ್. ತಿಳಿಸಿದ್ದಾರೆ