ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ರೈಲ್ವೆ (Indian Railways) ಪ್ರಯಾಣಿಕರ ಅನುಕೂಲಕ್ಕಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಜುಲೈ 1ರಿಂದ ರೈಲು ಹೊರಡುವ 8 ಗಂಟೆಗಳ ಮೊದಲು ರಿಸರ್ವೇಷನ್ ಪಟ್ಟಿಯನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ. ಇದುವರೆಗೆ ಈ ಪಟ್ಟಿ ರೈಲು ಹೊರಡುವ 4 ಗಂಟೆಗಳ ಮೊದಲು ಪ್ರಕಟವಾಗುತ್ತಿತ್ತು. ಹೊಸ ನಿಯಮದ ಪ್ರಕಾರ, ವೇಟಿಂಗ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಟಿಕೆಟ್ ಸಿಗದ ಪರಿಸ್ಥಿತಿಯಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಹೆಚ್ಚಿನ ಸಮಯ ಲಭ್ಯವಾಗಲಿದೆ.
ಈ ಕ್ರಮದಿಂದ ಪ್ರಯಾಣಿಕರಿಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದ್ದು, ತುರ್ತು ಸಂದರ್ಭಗಳಲ್ಲಿ ಇತರೆ ಸಾರಿಗೆ ವ್ಯವಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯವಾಗಲಿದೆ. ಈ ಹಿಂದೆ ಚಾರ್ಟ್ ಬಿಡುಗಡೆಯ ಸಮಯದ ಕಡಿಮೆ ಅವಧಿಯೇ ಹಲವಾರು ಪ್ರಯಾಣಿಕರ ಗೊಂದಲಕ್ಕೆ ಕಾರಣವಾಗಿತ್ತು ಎಂಬುದು ಗಮನಾರ್ಹ.
ತತ್ಕಾಲ್ ಟಿಕೆಟ್ ಬುಕ್ಕಿಂಗ್‌ನಲ್ಲಿ ಆಧಾರ್ ದೃಢೀಕರಣ ಕಡ್ಡಾಯ
ಭಾರತೀಯ ರೈಲ್ವೆ ಮತ್ತೊಂದು ಮಹತ್ವದ ಬದಲಾವಣೆ ಮಾಡಿದ್ದು, ಜುಲೈ 1ರಿಂದ ಆರಂಭವಾಗುವಂತೆ ತತ್ಕಾಲ್ ಟಿಕೆಟ್ ಬುಕ್ ಮಾಡಲು ಬಳಕೆದಾರರು ತಮ್ಮ ಗುರುತನ್ನು ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಆಧಾರ್ ಅಥವಾ ಡಿಜಿಟಲ್ ಗುರುತಿನ ದಾಖಲೆಗಳಿಂದ ದೃಢೀಕರಿಸಬೇಕಾಗುತ್ತದೆ. ಇದರಿಂದ ಟಿಕೆಟ್ ದಂಧೆ ಮತ್ತು ಅನಧಿಕೃತ ಬುಕ್ಕಿಂಗ್‌ಗಳಿಗೆ ಕಡಿವಾಣ ಬೀಳಲಿದೆ ಎಂದು ರೈಲ್ವೆ ಇಲಾಖೆಯು ಅಭಿಪ್ರಾಯಪಟ್ಟಿದೆ.
ಜುಲೈ ಅಂತ್ಯದೊಳಗಾಗಿ ತತ್ಕಾಲ್ ಬುಕ್ಕಿಂಗ್‌ಗಾಗಿ ಒಟಿಪಿ ಆಧಾರಿತ ದೃಢೀಕರಣ ವ್ಯವಸ್ಥೆಯ ಅನ್ವಯಿಸಲಾಗುವುದು. ಬಳಕೆದಾರರು ತಮ್ಮ ಆಧಾರ್ ಸಂಖ್ಯೆಯ ಮೂಲಕ ಅಥವಾ ಡಿಜಿಲಾಕರ್‌ನಲ್ಲಿರುವ ಗುರುತಿನ ದಾಖಲೆಗಳ ಮೂಲಕ ಲಾಗಿನ್ ಆಗಿ, ತತ್ಕಾಲ್ ಟಿಕೆಟ್‌ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸೆಪ್ಟೆಂಬರ್‌ನಲ್ಲಿ ಹೊಸ ಬುಕ್ಕಿಂಗ್ ಪ್ಲಾಟ್‌ಫಾರ್ಮ್ ಪರಿಚಯ
ರೈಲ್ವೆ ಇಲಾಖೆ ಸೆಪ್ಟೆಂಬರ್‌ನಲ್ಲಿ ಹೊಸ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಪರಿಚಯಿಸಲು ಯೋಜನೆ ರೂಪಿಸಿದೆ. ಈಗ ಪ್ರತಿ ನಿಮಿಷ 32,000 ಟಿಕೆಟ್‌ಗಳನ್ನು ಬುಕ್ ಮಾಡಲು ಅವಕಾಶವಿದ್ದರೆ, ನವೀಕರಿಸಿದ ವ್ಯವಸ್ಥೆ ಪ್ರಕಾರ ಪ್ರತಿ ನಿಮಿಷ 1.5 ಲಕ್ಷ ಟಿಕೆಟ್‌ಗಳು ಬುಕ್ ಆಗುವ ಸಾಮರ್ಥ್ಯ ಇರುತ್ತದೆ. ಜೊತೆಗೆ, ಈ ವೆಬ್‌ಪ್ಲಾಟ್‌ಫಾರ್ಮ್ ಬಹುಭಾಷಾ ಬೆಂಬಲ ಹಾಗೂ ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಹೊಂದಿರಲಿದೆ.
ಈ ಎಲ್ಲಾ ಬದಲಾವಣೆಗಳು ಪ್ರಯಾಣಿಕರ ಅನುಭವವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದ್ದು, ಸುರಕ್ಷಿತ, ಸುಲಭ ಹಾಗೂ ವೇಗದ ಸೇವೆ ಒದಗಿಸಲು ಭಾರತೀಯ ರೈಲ್ವೆ ಬದ್ಧವಾಗಿದೆ.