Saturday, January 10, 2026

ಜವರಾಯನಾಗಿ ಬಂದ ಆಡಿ ಕಾರು: ಪಾದಚಾರಿಗಳಿಗೆ ಡಿಕ್ಕಿ, ಓರ್ವ ಸಾವು,16 ಮಂದಿ ಗಂಭೀರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಸ್ತೆಯ ಪಕ್ಕದಲ್ಲಿ ನಿಂತವರ ಬದುಕು ಕ್ಷಣಾರ್ಧದಲ್ಲಿ ಬದಲಾಗುವಂತಹ ಘಟನೆಯೊಂದು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ. ತಡರಾತ್ರಿ ನಿಯಂತ್ರಣ ತಪ್ಪಿದ ಐಷಾರಾಮಿ ಆಡಿ ಕಾರು ಪಾದಚಾರಿ ಹಾಗೂ ವ್ಯಾಪಾರಸ್ಥರ ಮೇಲೆ ನುಗ್ಗಿ ಭೀಕರ ಅಪಘಾತಕ್ಕೆ ಕಾರಣವಾಗಿದೆ. ಈ ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ.

ಜೈಪುರದ ಜರ್ನಲಿಸ್ಟ್ ಕಾಲೋನಿ ವ್ಯಾಪ್ತಿಯ ಖರಾಬಾಸ್ ಸರ್ಕಲ್ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಅತೀವೇಗದಲ್ಲಿ ಚಲಿಸುತ್ತಿದ್ದ ಆಡಿ ಕಾರು ಮೊದಲು ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದು, ನಂತರ ಪಾದಚಾರಿ ಮಾರ್ಗದತ್ತ ನುಗ್ಗಿದೆ. ಪರಿಣಾಮವಾಗಿ ಸುಮಾರು 30 ಮೀಟರ್ ದೂರದವರೆಗೆ ರಸ್ತೆಬದಿಯ ಆಹಾರ ಬಂಡಿಗಳು ಮತ್ತು ತಾತ್ಕಾಲಿಕ ಅಂಗಡಿಗಳಿಗೆ ಕಾರು ಢಿಕ್ಕಿ ಹೊಡೆದಿದೆ.

ಇದನ್ನೂ ಓದಿ: FOOD | ವೆದರ್‌ ಯಾವುದೇ ಇರಲಿ, ಬಿಸಿ ಬಿಸಿ ಕಾಯಿತುರಿ ಉಪ್ಪಿಟ್‌ ಸಿಕ್ರೆ ಸೂಪರ್‌ ಅಲ್ವಾ?

ಡಿಕ್ಕಿಯ ತೀವ್ರತೆಗೆ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಎಸ್‌ಎಂಎಸ್ ಹಾಗೂ ಜೈಪುರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಕಾರಿನಲ್ಲಿ ನಾಲ್ವರು ಇದ್ದರು ಎನ್ನಲಾಗಿದ್ದು, ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಚಾಲಕ ಮದ್ಯಪಾನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.

error: Content is protected !!