ಹೊಸದಿಗಂತ ಡಿಜಿಟಲ್ ಡೆಸ್ಕ್
ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳಿಗೆ ಇಂದು ಅಧಿಕೃತ ಚಾಲನೆ ಸಿಗಲಿದೆ. ಇಂದಿನಿಂದ ಆರಂಭಗೊಳ್ಳಲಿರುವ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಬದ್ಧವೈರಿಗಳಾದ ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸಿಡ್ನಿಯ ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಮುಖಾಮುಖಿಯಾಗಲಿವೆ. ಸಂಜೆ ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿರುವಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನವನ್ನು ಎದುರಿಸಲಿದೆ.
ಕಳೆದ ವರ್ಷ ಯುಎಇ ಯಲ್ಲಿ ಸಾಗಿದ್ದ ವಿಶ್ವಕಪ್ ನಲ್ಲಿ ಈ ಎರಡು ತಂಡಗಳು ಕಾದಾಡಿದ್ದವು. ಈ ಕಾದಾಟದಲ್ಲಿ ಗೆದ್ದಿದ್ದ ಆಸ್ಟ್ರೇಲಿಯಾವು ಚೊಚ್ಚಲಬಾರಿಗೆ ವಿಶ್ವ ಚಾಫಿಯನ್ ಪಟ್ಟ ಅಲಂಕರಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ನ್ಯೂಜಿಲೆಂಡ್ ತಹತಹಿಸುತ್ತಿದೆ.
ಎರಡೂ ತಂಡಗಳು ಅಭ್ಯಾಸ ಪಂದ್ಯದಲ್ಲಿ ಸೋಲನನ್ನನುಭವಿಸಿವೆ. ಭಾರತದ ಎದುರು ಆಸ್ಟ್ರೇಲಿಯಾ 6 ರನ್‌ಗಳಿಂದ ಸೋಲು ಅನುಭವಿಸಿದೆ. ನ್ಯೂಜಿಲೆಂಡ್ ಸೌತ್ ಆಫ್ರಿಕಾ ವಿರುದ್ಧ 9 ರನ್ ಗಳಿಂದ ಸೋತಿದೆ.
ಆತಿಥೇಯ ಆಸ್ಟ್ರೇಲಿಯಾವು ಅಬ್ಬರದ ಬ್ಯಾಟ್ಸ್ ಮನ್ ಗಳ ಪಡೆಯನ್ನೇ ಹೊಂದಿದೆ. ನಾಯಕ ಆರೋನ್ ಫಿಂಚ್, ಸ್ಫಟಕ್ ಆರಂಭಿಕ ಡೇವಿಡ್ ವಾರ್ನರ್, ಯಂಗ್ ಡೈನಾಮಿಕ್ ಪ್ಲೆಯರ್ ಟಿಮ್ ಡೇವಿಡ್, ಕೀಪರ್ ಮ್ಯಾಥ್ಯೂ ವೇಡ್, ಪವರ್ ಹಿಟ್ಟರ್ ಗಳಾದ ಮ್ಯಾಕ್ಸ್‌ವೆಲ್, ಸ್ಟೊಯಿನಿಸ್ ಅವರಂತಹ ಫೈರ್ ಪವರ್ ಹೊಂದಿದೆ. ಜೊತೆಗೆ ಯುವ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ತಂಡಕ್ಕೆ ಸೇರ್ಪಡೆಯಾಗಿದ್ದು ತಂಡದ ಬಲ ನೂರ್ಮಡಿಯಾಗಿದೆ.
ಆಸೀಸ್ ಬೌಲಿಂಗ್ ವಿಭಾಗದಲ್ಲೂ ಅನುಭವಿಗಳನ್ನು ಹೊಂದಿದೆ. ಜೋಸ್ ಹ್ಯಾಜಲ್‌ವುಡ್ ಅವರು 2022 ರಲ್ಲಿ 13 ಪಂದ್ಯಗಳಲ್ಲಿ 21 ವಿಕೆಟ್ ಗಳೊಂದಿಗೆ ಅಗ್ರ ಆಸೀಸ್ ವಿಕೆಟ್ ಟೇಕರ್ ಆಗಿದ್ದಾರೆ. ಘತಕ ವೇಗಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಆಡಮ್ ಝಂಪಾ ಬೌಲಿಂಗ್ ವಿಭಾಗದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಮತ್ತೊಂದೆಡೆ, ನ್ಯೂಜಿಲೆಂಡ್ ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ತ್ರಿಕೋನ ಸರಣಿಯಲ್ಲಿ ಸೋತಿದೆ. ಆದರೆ ಒಟ್ಟಾರೆ ಈ ವರ್ಷ ಕೇನ್ ವಿಲಿಯಮ್ಸನ್ ಪಡೆ ಉತ್ತಮ ಪ್ರದರ್ಶನ ನೀಡಿದೆ.
2022 ರಲ್ಲಿ ಕಿವೀಸ್ ತಾನು ಆಡಿದ 16 ಟಿ 20 ಪಂದ್ಯಗಳಲ್ಲಿ 12 ಅನ್ನು ಗೆದ್ದಿದೆ. ಈ ಪೈಕಿ ಕೇವಲ 3 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ರದ್ದಾಗಿತ್ತು. ಈ ವರ್ಷ, ಗ್ಲೆನ್ ಫಿಲಿಪ್ಸ್ 153 ಸ್ಟ್ರೈಕ್ ರೇಟ್‌ನಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 449 ರನ್‌ಗಳೊಂದಿಗೆ ಬ್ಲ್ಯಾಕ್‌ಕ್ಯಾಪ್ಸ್‌ನ ಅಗ್ರ ಸ್ಕೋರರ್ ಆಗಿದ್ದಾರೆ. ಕಾನ್ವೆ 8 ಇನ್ನಿಂಗ್ಸ್‌ಗಳಲ್ಲಿ 339 ರನ್‌ಗಳೊಂದಿಗೆ ಉತ್ತಮ ಫಾರ್ಮ್‌ನಲ್ಲಿ ಕಾಣುತ್ತಿದ್ದಾರೆ. ಫಿನ್ ಅಲೆನ್ (12 ಇನ್ನಿಂಗ್ಸ್‌ಗಳಲ್ಲಿ 313 ರನ್) ತಂಡದ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಇಶ್ ಸೋಧಿ, ಟಿಮ್ ಸೌದೀ, ಟ್ರೆಂಟ್ ಬೌಲ್ಟ್ ಹಾಗೂ ಲೂಕಿ ಫರ್ಗುಸನ್ ಅವರಿರುವ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಸೂಪರ್ 12 ಹಂತದ ಮೊದಲ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:30ಕ್ಕೆ ಶುರುವಾಗಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ