ಹೊಸದಿಗಂತ ವರದಿ ಮಡಿಕೇರಿ:
ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಿಕ್ಷಾ ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಿದ್ದಾಪುರದ ಪಾಲಿಬೆಟ್ಟ ರಸ್ತೆಯಲ್ಲಿ ವಾಸವಿರುವ ಮೊಹಮ್ಮದ್ ಎಂಬವರ ಮಗ ಅನ್ಸಾರ್ ( 34) ಎಂದು ಗುರುತಿಸಲಾಗಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದ ಕಾರಣ ಬಾಲಕಿಯು ಸ್ಪೆಷಲ್ ಕ್ಲಾಸ್’ಗೆ ತೆರಳಲೆಂದು ನೆಲ್ಯಹುದಿಕೇರಿಯಲ್ಲಿ ನಿಂತಿದ್ದಳೆನ್ನಲಾಗಿದೆ. ಈ ಸಂದರ್ಭ ಅಲ್ಲಿಗೆ ಬಂದ ಆಟೋ ಚಾಲಕ ತಾನು ಶಾಲೆ ಕಡೆಗೆ ತೆರಳುವುದಾಗಿ ಹೇಳಿದ ಮೇರೆಗೆ ಬಾಲಕಿ ಆಟೋ ಹತ್ತಿದ್ದಾಳೆ.
ಸಿದ್ದಾಪುರದಲ್ಲಿರುವ ತನ್ನ ಶಾಲೆ ತಲುಪುತ್ತಿದ್ದಂತೆ ಆಟೋ ನಿಲ್ಲಿಸುವಂತೆ ಚಾಲಕನಿಗೆ ಹೇಳಿದರೂ, ಆತ ಅಲ್ಲಿ ನಿಲ್ಲಿಸದೆ ಅಮ್ಮತ್ತಿ ಕಡೆಗೆ ವೇಗವಾಗಿ ಆಟೋ ಚಲಾಯಿಸಿ ಅಲ್ಲಿಂದ ಪಾಲಿಬೆಟ್ಟ ಮಾರ್ಗದಲ್ಲಿ ಕರೆದೊಯ್ದು, ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭ ಬಾಲಕಿ ಕಿರುಚಿದ್ದು, ಹೆದರಿದ ಚಾಲಕ ಆಕೆಯ ಬಳಿ ಕಿರುಚಬೇಡ ಎಂದು ಹೇಳಿ ಮತ್ತೆ ಸಿದ್ದಾಪುರಕ್ಕೆ ಕರೆತಂದು ಬಿಟ್ಟಿದ್ದಾನೆ ಎಂದು ಬಾಲಕಿ ತನ್ನ ಪೋಷಕರ ಬಳಿ ಅಳಲು ತೋಡಿಕೊಂಡಿದ್ದಾಳೆ.
ಈ ಸಂಬಂಧ ಬಾಲಕಿಯ ಪೋಷಕರು ನೀಡಿದ ದೂರಿನನ್ವಯ ಸಿದ್ದಾಪುರ ಪೊಲೀಸರು ಪೋಕ್ಸೋ ಕಾಯ್ದೆ ಹಾಗೂ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ಆಟೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.



