ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲೇ ಆಟೋ ದರ ದುಬಾರಿ ಎನ್ನುವವರಿಗೆ ಇದೀಗ ಮತ್ತೆ ಶಾಕಿಂಗ್ ಸುದ್ದಿ ಎದುರಾಗಿದೆ. ಬೆಂಗಳೂರು ಆಟೋ ಮೀಟರ್ ದರ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘ ಒತ್ತಾಯ ಮಾಡಿದ್ದು, ಒತ್ತಾಯಕ್ಕೆ ಸರ್ಕಾರ ಮಣಿದರೆ ಆಟೋ ದರ ಮತ್ತಷ್ಟು ಹೆಚ್ಚಳವಾಗಲಿದೆ.
ಆಟೋ ಚಾಲಕರ ಸಂಘ ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರಿಗೆ ಪತ್ರ ಬರೆದು, ಬೆಂಗಳೂರಿನಲ್ಲಿ ಆಟೋ ರಿಕ್ಷಾ ದರವನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪರಿಷ್ಕರಿಸಲು ಕೋರಿದೆ. ಬೆಂಗಳೂರು ನಗರದಲ್ಲಿ ಆಟೋ ಮೀಟರ್ ದರ ಏರಿಕೆ ಮಾಡುವ ಅಧಿಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಮಿಟಿಗೆ ಮಾತ್ರ ಅವಕಾಶ ಇರುವುದರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುತ್ತಿದೆ.
ಪ್ರತಿ ವರ್ಷ ದರಗಳನ್ನು ಪರಿಷ್ಕರಿಸಿದರೆ, ಆಟೋ ಚಾಲಕರು ಪ್ರಯಾಣಿಕರಿಗೆ ಸೇವೆ ನಿರಾಕರಿಸುವುದನ್ನು ತಪ್ಪಿಸಬಹುದು. ಅಲ್ಲದೆ, ಅಧಿಕ ಶುಲ್ಕ ವಿಧಿಸುವ ದೂರುಗಳನ್ನು ಕಡಿಮೆ ಮಾಡಬಹುದು ಎಂದು ಸಂಘ ಪತ್ರದಲ್ಲಿ ತಿಳಿಸಿದೆ. ಮೂರು ವರ್ಷಗಳಿಂದ ಪ್ರಯಾಣ ದರ ಏರಿಕೆಯಾಗದ ಕಾರಣ ಕನಿಷ್ಠ ಆಟೋ ದರವನ್ನು ಕೂಡ ಹೆಚ್ಚಿಸುವಂತೆ ಸಂಘ ಒತ್ತಾಯಿಸಿದೆ. ಈ ಬಗ್ಗೆ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಮಾಹಿತಿ ನೀಡಿದ್ದಾರೆ.