ಹೊಸದಿಗಂತ ವರದಿ,ಶಿವಮೊಗ್ಗ:
ನಗರದಲ್ಲಿ ಬಹು ನಿರೀಕ್ಷೆಯ ಆಟೋ ಪ್ರಯಾಣ ದರ ಪರಿಷ್ಕರಣೆಯಾಗಿದೆ. ಆರಂಭದ 1.5 ಕಿಮೀಗೆ 40 ರೂ. ಹಾಗೂ ನಂತರದ ಪ್ರತಿ ಕಿಮೀಗೆ 20 ರೂ. ನಿಗದಿ ಮಾಡಲಾಗಿದೆ.
ಜಿಲ್ಲಾಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಸಾರಿಗೆ ಪ್ರಾಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ನೂತನ ದರ ಪ್ರಕಟಿಸಿದರು.
ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಶೇ.50ರಷ್ಟು ಹೆಚ್ಚು ದರವನ್ನು ಪ್ರಯಾಣಿಕರು ಪಾವತಿ ಮಾಡಬೇಕಾಗುತ್ತದೆ. ಮೀಟರ್ ಅಳವಡಿಸಿಕೊಂಡ ಆಟೋಗಳು ಮಾತ್ರ ಪರಿಷ್ಕೃತ ದರ ಪಡೆಯಬೇಕೆಂದು ಜಿಲ್ಲಾಕಾರಿ ಷರತ್ತು ವಿಧಿಸಿದರು. ಮೀಟರ್ ಅಳವಡಿಸದೇ ಇದ್ದವರು ಹಳೆಯ ದರವನ್ನೇ ಪಡೆಯಬೇಕು. ಒಂದು ತಿಂಗಳಲ್ಲಿ ಕಡ್ಡಾಯವಾಗಿ ಮೀಟರ್ ಹಾಗೂ ಚಾಲಕರ ಮಾಹಿತಿಯುಳ್ಳ ಡಿಸ್‌ಪ್ಲೇ ಕಾರ್ಡ್ ಅಳವಡಿಸಬೇಕು ಎಂದು ಸೂಚಿಸಿದರು.
ಕನಿಷ್ಠ ಪ್ರಯಾಣ ದರವನ್ನು 2 ಕಿಮೀಗೆ 40 ರೂ. ನಿಗದಿ ಮಾಡಲು ಜಿಲ್ಲಾಧಿಕಾರಿ ಪ್ರಸ್ತಾಪಿಸಿದರು. ಆದರೆ ಇದು ತೀರಾ ಕಡಿಮೆ. 6 ವರ್ಷಗಳಿಂದ ಪ್ರಯಾಣ ದರ ನಿಗದಿ ಮಾಡಿಲ್ಲ ಎಂದು ಆಟೋ ಚಾಲಕರು ಆಕ್ಷೇಪಿಸಿದರು. ಆಟೋ ಚಾಲಕರ ಅಳಲು ಪರಿಗಣಿಸಿ ಕನಿಷ್ಠ ದೂರವನ್ನು 1.5 ಕಿಮೀಗೆ ನಿಗದಿ ಮಾಡಲಾಯಿತು.
ಎಸ್ಪಿ ಮಿಥುನ್ ಕುಮಾರ್, ಸಾರಿಗೆ ಅಧಿಕಾರಿ ಗಂಗಾಧರ, ಆಟೋ ಸಂಘದ ಪದಾಧಿಕಾರಿಗಳು ಹಾಜರಿದ್ದರು.