ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸಿನಿಮಾ ಲೋಕದ ಗಮನ ಸೆಳೆದಿದ್ದ ‘ಅವತಾರ್: ಫೈರ್ ಅಂಡ್ ಆಶ್’ ಚಿತ್ರವು ಇದೀಗ ಅಧಿಕೃತವಾಗಿ ಚಿತ್ರಮಂದಿರಗಳಿಗೆ ಕಾಲಿಟ್ಟಿದೆ. ವರ್ಷಗಳಿಂದ ಕುತೂಹಲ ಹುಟ್ಟುಹಾಕಿದ್ದ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ಯಾಂಡೋರಾ ಲೋಕದ ಮುಂದಿನ ಅಧ್ಯಾಯವನ್ನು ನೋಡಲು ಕಾಯುತ್ತಿದ್ದ ಸಿನಿಪ್ರೇಮಿಗಳು ಥಿಯೇಟರ್‌ಗಳತ್ತ ಹರಿದುಬಂದಿದ್ದಾರೆ.
ಜೇಮ್ಸ್ ಕ್ಯಾಮೆರೂನ್ ನಿರ್ದೇಶನದ ‘ಅವತಾರ್’ ಸರಣಿಯ ಮೂರನೇ ಭಾಗವಾಗಿರುವ ಈ ಚಿತ್ರಕ್ಕೆ ರಿಲೀಸ್‌ಗೂ ಮುನ್ನವೇ ಭಾರೀ ಹೈಪ್ ನಿರ್ಮಾಣವಾಗಿತ್ತು. ಈ ತಿಂಗಳ ಮೊದಲ ದಿನ ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಪ್ರೀಮಿಯರ್ ನಡೆದಿದ್ದು, ಸ್ಯಾಮ್ ವರ್ತಿಂಗ್ಟನ್, ಜೊಯಿ ಸಲ್ಡಾನಾ ಮತ್ತು ಸ್ಟೀಫನ್ ಲ್ಯಾಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2009ರಲ್ಲಿ ಬಿಡುಗಡೆಯಾದ ಮೊದಲ ಅವತಾರ್ ಚಿತ್ರ ಜಾಗತಿಕವಾಗಿ ದಾಖಲೆ ಬರೆದರೆ, 2022ರಲ್ಲಿ ಬಂದ ‘ದಿ ವೇ ಆಫ್ ವಾಟರ್’ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.
ಇದೀಗ ‘ಫೈರ್ ಅಂಡ್ ಆಶ್’ ಕುರಿತು ಇಂಗ್ಲಿಷ್ ಮಾಧ್ಯಮಗಳಲ್ಲಿ ವಿಮರ್ಶೆಗಳು ಹೊರಬಿದ್ದಿವೆ. ದೃಶ್ಯ ವೈಭವ, ಯುದ್ಧ ದೃಶ್ಯಗಳು ಹಾಗೂ ಭರ್ಜರಿ VFX ಚಿತ್ರಕ್ಕೆ ಶಕ್ತಿ ನೀಡಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ, ದೀರ್ಘ ರನ್‌ಟೈಮ್ ಮತ್ತು ಕಥಾನಕದ ಹೊಸತನದ ಕೊರತೆ ಕೆಲವರಿಗೆ ನಿರಾಶೆ ತಂದಿದೆ ಎನ್ನಲಾಗಿದೆ. ಒಟ್ಟಿನಲ್ಲಿ, ದೃಶ್ಯ ಅನುಭವಕ್ಕಾಗಿ ಚಿತ್ರ ಒಮ್ಮೆ ನೋಡಬಹುದಾದ ಪ್ರಯತ್ನವಾಗಿ ಪ್ರೇಕ್ಷಕರ ಮುಂದೆ ಬಂದಿದೆ.

