ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶನಿವಾರ ರಾತ್ರಿ ಬೃಹತ್ ದೀಪೋತ್ಸವ ನಡೆಯಲಿದೆ. ವಿಶ್ವದಲ್ಲೇ ಪ್ರಥಮ ಬಾರಿಗೆ 24 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಪವಿತ್ರ ನಗರಿ ಅಯೋಧ್ಯೆಯ ಸರಯೂ ನದಿ ತೀರ ಬೃಹತ್ ಬೆಳಕಿನ ದೀಪಗಳಿಂದ ಪ್ರಜ್ವಲಿಸಲಿದೆ.
ಶನಿವಾರ ಸಂಜೆ ಸರಯೂ ನದಿ ದಡದಲ್ಲಿ ಅದ್ಧೂರಿ ದೀಪೋತ್ಸವ ಹಾಗೂ ಲೇಸರ್ ಶೋ ನಡೆಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ಸರಯೂ ನದಿಯ ದಡದಲ್ಲಿರುವ 51 ಘಾಟ್‌ಗಳಲ್ಲಿ 24 ಲಕ್ಷ ದೀಪಗಳನ್ನು ಅಳವಡಿಸಲಾಗಿದೆ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾನಿಲಯವು ಈ ಉತ್ಸವಕ್ಕೆ ಅದ್ಧೂರಿ ವ್ಯವಸ್ಥೆಯನ್ನು ಮಾಡಿದೆ. 24 ಲಕ್ಷ ಮಣ್ಣಿನ ದೀಪಗಳನ್ನು ಹೊಂದಿರುವ ರಂಗವಲ್ಲಿ ಮತ್ತು ಹೂವುಗಳಿಂದ ಗಿನ್ನಿಸ್ ದಾಖಲೆ ನಿರ್ಮಿಸಲು ದೀಪೋತ್ಸವಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಜಾರ್ಖಂಡ್‌ನ ಪಾಕುರ್ ಜಿಲ್ಲೆಯ ಆದಿವಾಸಿಗಳು ಸೇರಿದಂತೆ ವಿವಿಧ ಪ್ರದೇಶಗಳ ಜನರು ಈ ದೀಪೋತ್ಸವವನ್ನು ವೀಕ್ಷಿಸಲಿದ್ದಾರೆ.
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಜಾರ್ಖಂಡ್ ಆದಿವಾಸಿ ಜನಾಂಗದವರು ದೀಪ ಬೆಳಗಿಸಲಿದ್ದಾರೆ. ಈ ಬೆಳಕಿನ ಹಬ್ಬದಲ್ಲಿ ಭಾಗವಹಿಸಲು ಆದಿವಾಸಿ ಜನರು ಬರಿಗಾಲಿನಲ್ಲಿ ಅಯೋಧ್ಯೆಗೆ ತಲುಪಿದ್ದಾರೆ.
ಅಯೋಧ್ಯೆಯ 51 ಘಾಟ್‌ಗಳಲ್ಲಿ ಶನಿವಾರ ನಡೆಯಲಿರುವ ದೀಪೋತ್ಸವದಲ್ಲಿ 25 ಸಾವಿರ ಸ್ವಯಂಸೇವಕರು ಭಾಗವಹಿಸಲಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ರಾಮ ಮಂದಿರ ನಿರ್ಮಾಣ ಪೂರ್ಣಗೊಂಡು ಉದ್ಘಾಟನೆಯಾಗುವ ಹಿನ್ನೆಲೆಯಲ್ಲಿ ಈ ವರ್ಷದ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ನಡೆಸುತ್ತಿರುವುದು ವಿಶೇಷ.