ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಮೆರಿಕದಾದ್ಯಂತ ಒಟ್ಟು 60 ದಿನಗಳ ರಥಯಾತ್ರೆಯನ್ನು ಅಮೆರಿಕ, ಕೆನಡಾದ ವಿಶ್ವ ಹಿಂದೂ ಪರಿಷತ್ ಘಟಕಗಳು ಹಮ್ಮಿಕೊಂಡಿವೆ.
ಈ ಯಾತ್ರೆಯು ಒಟ್ಟು 48 ರಾಜ್ಯಗಳಲ್ಲಿ ಸುಮಾರು 13 ಸಾವಿರ ಕಿ.ಮೀ ಸಾಗಲಿದೆ. ಮಾ.25ಕ್ಕೆ ಚಿಕಾಗೊದಿಂದ ಆರಂಭವಾಗಲಿರುವ ಈ ಯಾತ್ರೆಯು ಮೇ 23ರಂದು ಇಲಿನೊಯಿಸ್ ರಾಜ್ಯದಲ್ಲಿ ಸಮಾರೋಪಗೊಳ್ಳಲಿದೆ.
ಯಾತ್ರೆಯುದ್ದಕ್ಕೂ ಅಮೆರಿಕದ 851 ಹಿಂದೂ ದೇವಾಲಯಗಳನ್ನು ಸಂದರ್ಶಿಸಲಾಗುತ್ತದೆ. ಸಿಂಗರಿಸಿದ ವಾಹನದಲ್ಲಿ ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತನ ಮೂರ್ತಿಯೊಂದಿಗೆ ಯಾತ್ರೆ ಸಂಚರಿಸಲಿದೆ. ಈ ವೇಳೆ ಅಯೋಧ್ಯೆಯಿಂದ ಬಂದಿರುವ ಅಕ್ಷತೆ, ಪ್ರಸಾದ ಹಾಗೂ ತೀರ್ಥವನ್ನು ಅಮೆರಿಕದ ಹಿಂದು ದೇವಾಲಯಗಳಿಗೆ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್‌ನ ಅಮೆರಿಕ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಯಾತ್ರೆಯ ಸಂಘಟಕರಾದ ಅಮಿತಾಬ್ ಮಿತ್ತಲ್ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಯಾತ್ರೆಯೊಂದು ಅಮೆರಿಕದ ಹಿಂದುಗಳಿಂದ ನಡೆಯುತ್ತಿದೆ ಎಂದು ಅಮೆರಿಕದ ಹಿಂದು ಮಂದಿರ ಅಭಿವೃದ್ಧಿ ಸಮಿತಿ ಸಂಯೋಜಕಿ ತೇಜಲ್ ಶಾ ತಿಳಿಸಿದ್ದಾರೆ.