ಹೊಸ ದಿಗಂತ ವರದಿ, ಶಿವಮೊಗ್ಗ:
ಈಗ ರಾಮನ ದೇವಸ್ಥಾನದ ನಿರ್ಮಾಣ ಕನಸು ಈಡೇರಿದೆ. ಮುಂದೆ ಉಳಿದಿರುವುದು ಕೃಷ್ಣ ಉತ್ಸವ. ಅದಕ್ಕೆ ಸಿದ್ಧರಾಗೋಣ ಎಂದು ಉಡುಪಿ ಪುತ್ತಿಗೆ ಮಠದ ದೀವಾನರಾದ ಗೋಪಾಲಾಚಾರ್ ಕರೆ ನೀಡಿದರು.
ಅಯೋಧ್ಯೆಯಲ್ಲಿ ರಾಮಲಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್, ವಿಎಚ್‌ಪಿ ಹಾಗೂ ಸಂಘ ಪರಿವಾರದ ವಿವಿಧ ಸಂಘಟನೆಗಳಿಂದ ಶನಿವಾರ ಮೈಲಾರೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪವಿತ್ರ ಮಂತ್ರಾಕ್ಷತೆ ವಿತರಣೆಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಕ್ತಿ ನೀಡಿದವರು ಕೃಷ್ಣ ಉತ್ಸವಕ್ಕೂ ಬೆಂಬಲ ನೀಡುತ್ತಾರೆ. ರಾಮ ಬೇರೆ ಅಲ್ಲ, ಕೃಷ್ಣ ಬೇರೆ ಅಲ್ಲ. ರಾಮ ಮಂದಿರದಂತೆ ಕೃಷ್ಣ ದೇವಾಲಯವೂ ನಿರ್ಮಾಣವಾಗಲಿದೆ. ಆ ಕಾರ್ಯಕ್ಕೆ ಈಗಿನಿಂದಲೇ ಸಜ್ಜಾಗೋಣ ಎಂದು ಹುರಿದುಂಬಿಸಿದರು.
ಅಂದು ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್, ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್, ವಿಎಚ್‌ಪಿ ನಾಯಕರಾಗಿದ್ದ ಅಶೋಕ್ ಸಿಂಘಾಲ್ ಸೇರಿದಂತೆ ಅನೇಕರು ರಾಮ ಮಂದಿರದ ವಿಷಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರೆಲ್ಲರೂ ಪ್ರಾತಃಸ್ಮರಣಿಯರು. ಮಂದಿರವಲ್ಲೇ ಕಟ್ಟುವೆವು ಎಂಬ ಘೋಷಣೆ ಈಗ ಸಾಕಾರಗೊಂಡಿದೆ. ಕನಸು ನನಸಾಗುತ್ತಿದೆ ಎಂದರು.
ಶಿವಮೊಗ್ಗ ವಿಭಾಗ ಪ್ರಚಾರಕ್ ನವೀನ್ ಸುಬ್ರಹ್ಮಣ್ಯ ಮಾತನಾಡಿದರು.
ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಬಜರಂಗದಳ ವಿಭಾಗದ ಸಂಚಾಲಕ ರಾಜೇಶ್ ಗೌಡ, ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ಬಿ.ಎ.ರಂಗನಾಥ, ನಗರ ಸಂಘಚಾಲಕ ಲೋಕೇಶ್ವರ ಕಾಳೆ, ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಮುಂತಾದವರಿದ್ದರು.
ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ್ದ ಪ್ರೊ.ಪಿ.ವಿ.ಕೃಷ್ಣ‘ಟ್, ಬಾ.ಸು.ಅರವಿಂದ, ಡಿ.ಎಚ್. ಶಂಕರಮೂರ್ತಿ, ಎಸ್.ಪದ್ಮನಾ‘ ಭಟ್, ಆರ್.ಕೆ. ಸಿದ್ದರಾಮಣ್ಣ, ಕೆ.ಎಸ್.ಈಶ್ವರಪ್ಪ, ಕೆ.ಸಿ.ನಟರಾಜ ಭಾಗವತ್, ಎಸ್.ಎನ್.ಹಾಲೇಶ್, ಬೆಲಗೂರು ಮಂಜುನಾಥ್, ಸುರೇಶ್, ವಿಜಯೇಂದ್ರ, ಎಸ್.ಎನ್.ಚನ್ನಬಸಪ್ಪ, ಚಿತ್ರಕೂಟ ಶ್ರೀನಿವಾಸ್, ನಾಗರಾಜ್ ಸೇರಿದಂತೆ ಅನೇಕರನ್ನು ಗೌರವಿಸಲಾಯಿತು. ಶಬರೀಷ್ ಕಣ್ಣನ್ ತಂಡದವರು ಸತ್ಸಂಗ ನಡೆಸಿಕೊಟ್ಟರು. ವಿದ್ವಾನ್ ಶಂಕರಾನಂದ ಜೋಯ್ಸ್ ವೇದಘೋಷ ಮಾಡಿದರು.