July 19, 2026
Sunday, July 19, 2026
spot_img

ಅಯೋಧ್ಯೆ ಟ್ರಸ್ಟ್ ಫಂಡ್ ವಂಚನೆ ವಿವಾದ: ಪ್ರಧಾನಿ ಮೌನದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಆರ್ಥಿಕ ವ್ಯವಹಾರಗಳಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬ ದೂರಿನ ಬೆನ್ನಲ್ಲೇ, ಕಾಂಗ್ರೆಸ್‌ನ ಅಗ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರವೊಂದನ್ನು ರವಾನಿಸಿದ್ದಾರೆ. ದೇವಸ್ಥಾನದ ನಿಧಿಯ ಸಂಪೂರ್ಣ ಆಡಿಟಿಂಗ್ ಹಾಗೂ ಉನ್ನತ ಮಟ್ಟದ ತನಿಖೆ ನಡೆಸುವಂತೆ ಇದರಲ್ಲಿ ಒತ್ತಾಯಿಸಲಾಗಿದೆ.

ಭಕ್ತರ ನಂಬಿಕೆಗೆ ದ್ರೋಹದ ಆತಂಕ

ದೇಶದ ಕೋಟ್ಯಂತರ ಸಾರ್ವಜನಿಕರು ತಮ್ಮ ಕಷ್ಟದ ಗಳಿಕೆಯನ್ನು ಭಕ್ತಿಪೂರ್ವಕವಾಗಿ ರಾಮಮಂದಿರಕ್ಕೆ ಸಮರ್ಪಿಸಿದ್ದಾರೆ. ಆದರೆ, ಟ್ರಸ್ಟ್‌ನಲ್ಲಿ ನಡೆದಿರುವ ಸಾವಿರಾರು ಕೋಟಿ ರೂಪಾಯಿಗಳ ದುರುಪಯೋಗವು ಈ ಭಕ್ತರ ವಿಶ್ವಾಸಕ್ಕೆ ಬಗೆದ ದ್ರೋಹವಾಗಿದೆ ಎಂದು ಪತ್ರದಲ್ಲಿ ವಿಷಾದಿಸಲಾಗಿದೆ. ಇಷ್ಟು ದೊಡ್ಡ ಹಗರಣದ ಬಗ್ಗೆ ಪ್ರಧಾನಿಯವರು ತಳೆದಿರುವ ನಿಗೂಢ ಮೌನವನ್ನು ಒಪ್ಪಲು ಸಾಧ್ಯವಿಲ್ಲ ಎಂದು ನಾಯಕರು ಟೀಕಿಸಿದ್ದಾರೆ.

ಟ್ರಸ್ಟ್ ರಚನೆ ಮತ್ತು ಸರ್ಕಾರದ ಜವಾಬ್ದಾರಿ

ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಈ ಟ್ರಸ್ಟ್ ಸ್ಥಾಪನೆಯನ್ನು ಘೋಷಿಸಿತ್ತು. ಇದರ ಪದಾಧಿಕಾರಿಗಳು ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ ಸಂಘಟನೆಗಳಿಗೆ ಸೇರಿದವರಾಗಿದ್ದು, ಪ್ರಧಾನಿಯವರ ನಿಕಟವರ್ತಿಗಳಾಗಿದ್ದಾರೆ. ಹೀಗಿರುವಾಗ, ಈ ಹಣಕಾಸು ವಂಚನೆಯ ಕುರಿತು ಸರ್ಕಾರಿ ಮಟ್ಟದಲ್ಲಿ ಯಾವುದೇ ತನಿಖೆ ಅಥವಾ ಪ್ರತಿಕ್ರಿಯೆ ಬಾರದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು ಕಾಂಗ್ರೆಸ್ ನಾಯಕರು ಪತ್ರದಲ್ಲಿ ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !