ವಿವಾದಿತ ಹೇಳಿಕೆ ನೀಡಿರುವ ಬಿ.ಕೆ. ಹರಿಪ್ರಸಾದ್ ಬಂಧನಕ್ಕೆ ಒತ್ತಾಯಿಸಿ ಎಸ್ಪಿ ಬಿಜೆಪಿ ದೂರು

ಹೊಸದಿಗಂತ ವರದಿ ಮಂಡ್ಯ :

ದೇಶ ಹಾಗೂ ರಾಜ್ಯದಲ್ಲಿ ಗೋದ್ರಾ, ಪುಲ್ವಾಮಾ ಮಾದರಿ ದಾಳಿ ಮರುಕಳಿಸಬಹುದೆಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್‌ಗೆ ದೂರು ಸಲ್ಲಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಭವನಕ್ಕೆ ತೆರಳಿದ ಕಾರ್ಯಕರ್ತರು, ಆಘಾತಕಾರಿ ಹಾಗೂ ಭಯದ ವಾತಾವರಣ ಸೃಷ್ಟಿಸುವಂತಹ ಹೇಳಿಕೆ ನೀಡಿರುವ ಹರಿಪ್ರಸಾದ್ ಅವರನ್ನು ವಿಚಾರಣೆಗೊಳಪಡಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದರು.

ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಆಪ್ತರಾಗಿರುವ ಬಿ.ಕೆ.ಹರಿಪ್ರಸಾದ್, ಮಾಧ್ಯಮಗಳ ಎದುರು ವಿವಾದಿತ ಹೇಳಿಕೆ ನೀಡಿದ್ದಾರೆ. ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ನಡೆಯುತ್ತಿದೆ. 500 ವರ್ಷದ ಹೋರಾಟ, 32 ಯುದ್ಧ ಹಾಗೂ ಲಕ್ಷಾಂತರ ಜನರ ರಕ್ತತರ್ಪಣದ ನಂತರ ಸಂತಸದ ಕ್ಷಣ ಮನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ಆಘಾತಕಾರಿಯಾಗಿದೆ. ಜತೆಗೆ ಭಾರತೀಯರಲ್ಲಿ ಭಯದ ವಾತಾವರಣ ಹುಟ್ಟುಹಾಕಿದೆ ಎಂದು ಆರೋಪಿಸಿದರು.

ಮಾತ್ರವಲ್ಲದೆ ನನ್ನ ಬಳಿ ಮಾಹಿತಿ ಇದೆ. ದೇಶದಲ್ಲಿ ಈ ಬಗ್ಗೆ ಎಲ್ಲೆಲ್ಲಿ ಸಭೆ ನಡೆದಿದೆ ಎಂಬ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಹಿತದೃಷ್ಟಿಯಿಂದ ಅವರ ಹೇಳಿಕೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಜತೆಗೆ ಅವರನ್ನು ವಿಚಾರಣೆ ಜತೆಗೆ ಮಂಪರು ಪರೀಕ್ಷೆಗೊಳಪಡಿಸಬೇಕು. ಇದರಿಂದ ಮಹತ್ವದ ಮಾಹಿತಿ ಸಿಗಹುದೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ಶಿವಕುಮಾರ್ ಆರಾಧ್ಯ, ಹೊಸಹಳ್ಳಿ ಶಿವು, ವಿನೋಭ, ಹೊಸಹಳ್ಳಿ ಮಂಜುನಾಥ್, ಪ್ರಸನ್ನಕುಮಾರ್, ಆನಂದ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!