Friday, January 23, 2026
Friday, January 23, 2026
spot_img

ಬಾಬರ್ ಔಟ್, ಸಿಕ್ಸರ್ಸ್ ಇನ್: ಹರಿಕೇನ್ಸ್ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಸಿಡ್ನಿ ಸಿಕ್ಸರ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದ ಸಿಡ್ನಿ ಸಿಕ್ಸರ್ಸ್ ತಂಡ, ಕೊನೆಗೂ ಭರ್ಜರಿಯಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಅವರ ಕಳಪೆ ಫಾರ್ಮ್ ಹಾಗೂ ತಂಡದೊಳಗಿನ ಕೆಲವು ವಿವಾದಗಳಿಂದಾಗಿ ಸುದ್ದಿಯಾಗಿದ್ದ ಸಿಡ್ನಿ ತಂಡ, ಇದೀಗ ಆಟದ ಮೂಲಕವೇ ಎಲ್ಲರಿಗೂ ಉತ್ತರ ನೀಡಿದೆ.

ಪ್ಲೇಆಫ್‌ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಹೋಬಾರ್ಟ್ ಹರಿಕೇನ್ಸ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಡ್ನಿ ಸಿಕ್ಸರ್ಸ್‌ಗೆ ಆರಂಭಿಕರು ಸಾಧಾರಣ ಸಾಥ್ ನೀಡಿದರು. ಆದರೆ, ತಂಡಕ್ಕೆ ಆಸರೆಯಾಗಿದ್ದು ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್. ಸ್ಮಿತ್ ಕೇವಲ 43 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಮನಮೋಹಕ ಸಿಕ್ಸರ್ ನೆರವಿನಿಂದ 65 ರನ್ ಚಚ್ಚಿದರು. ಈ ಮೂಲಕ ತಂಡವು ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಲು ನೆರವಾದರು.

ಗೆಲುವಿನ ಗುರಿ ಬೆನ್ನಟ್ಟಿದ ಹೋಬಾರ್ಟ್ ಹರಿಕೇನ್ಸ್ ತಂಡಕ್ಕೆ ಸಿಡ್ನಿಯ ಬೌಲರ್‌ಗಳು ಸಿಂಹಸ್ವಪ್ನವಾದರು. ಅದರಲ್ಲೂ ಬೆನ್ ಡ್ವಾರ್ಷಿಯಸ್ (26ಕ್ಕೆ 3 ವಿಕೆಟ್) ಮತ್ತು ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ (29ಕ್ಕೆ 2 ವಿಕೆಟ್) ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಇವರಿಗೆ ಶಾನ್ ಅಬಾಟ್, ಜೋಯಲ್ ಡೇವಿಡ್ (ತಲಾ 2 ವಿಕೆಟ್) ಹಾಗೂ ಜ್ಯಾಕ್ ಎಡ್ವರ್ಡ್ಸ್ ಉತ್ತಮ ಬೆಂಬಲ ನೀಡಿದರು.

ಪರಿಣಾಮವಾಗಿ, ಹೋಬಾರ್ಟ್ ತಂಡ ಕೇವಲ 141 ರನ್‌ಗಳಿಗೆ ಆಲೌಟ್ ಆಗುವ ಮೂಲಕ 57 ರನ್‌ಗಳ ಹೀನಾಯ ಸೋಲು ಕಂಡಿತು. ವಿವಾದಗಳನ್ನು ಮೆಟ್ಟಿನಿಂತ ಸಿಡ್ನಿ ಸಿಕ್ಸರ್ಸ್ ಇದೀಗ ಚಾಂಪಿಯನ್ ಪಟ್ಟಕ್ಕೇರಲು ಸಜ್ಜಾಗಿದೆ.

Must Read