ಹೊಸದಿಗಂತ ವರದಿ, ಕಾಸರಗೋಡು:
ಕಾಸರಗೋಡು ಇತಿಹಾಸ ಪ್ರಸಿದ್ಧ ಸರೋವರ ಕ್ಷೇತ್ರವೆಂದೇ ಜನಜನಿತವಾಗಿರುವ ಕುಂಬಳೆ ನಾಯ್ಕಾಪು ಸಮೀಪದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಾಲಯದ ಕೊಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ.
ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದ ಬಬಿಯಾ ಮೊಸಳೆಯು ಹರಿಪಾದ ಸೇರಿದ ಬಳಿಕ ಕುತೂಹಲ ಮೂಡಿಸುವಂತೆ ಮತ್ತೊಂದು ಮರಿ ಮೊಸಳೆಯು ಶನಿವಾರ ಮಧ್ಯಾಹ್ನ ಸರೋವರದಲ್ಲಿ ಗೋಚರಿಸಿದ್ದು ಭಕ್ತರಲ್ಲಿ ಪುಳಕ ಮೂಡಿಸಿದೆ.
ಶತಮಾನಗಳ ಇತಿಹಾಸವಿರುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ಕ್ಷೇತ್ರವು ಬಬಿಯಾ ಹೆಸರಿನ ಸಸ್ಯಾಹಾರಿ ಮೊಸಳೆಯಿಂದಲೂ ಪ್ರಸಿದ್ಧಿ ಪಡೆದಿತ್ತು. ದೇವಸ್ಥಾನದ ಸುತ್ತಲೂ ಹರಡಿರುವ ಸರೋವರದಲ್ಲಿ ವಾಸಿಸಿ ಸಾಧು ಪ್ರಾಣಿಯಾಗಿದ್ದ ಈ ಹಿಂದಿನ ಮೊಸಳೆಯು ಪ್ರತಿನಿತ್ಯ ಮಧ್ಯಾಹ್ನದ ಪೂಜೆಯ ನಂತರ ಅರ್ಚಕರು ನೀಡುವ ನೈವೇದ್ಯ ಸ್ವೀಕರಿಸಲು ಅಲ್ಪಹೊತ್ತು ಕೆಲವೊಮ್ಮೆ ಕಾಣಿಸಿಕೊಳ್ಳುತ್ತಿತ್ತು.
ಅನಂತಪುರದ ಬಬಿಯಾ ಮೊಸಳೆಯು 2022ನೇ ಅಕ್ಟೋಬರ್ 9 ರಂದು ಇಹಲೋಕ ತ್ಯಜಿಸಿತ್ತು. ಶ್ರೀ ಕ್ಷೇತ್ರದ ಇತಿಹಾಸವೇ ಹೇಳುವಂತೆ ಒಂದು ಮೊಸಳೆಯು ಮರೆಯಾದರೆ ಮತ್ತೊಂದು ತನ್ನಿಂದತಾನೇ ಹುಟ್ಟಿಕೊಳ್ಳುತ್ತದೆಂಬ ಪ್ರತೀತಿಯಿದೆ. ಕಳೆದ ಅಕ್ಟೋಬರ್ 9 ರಂದು ಹಿಂದಿನ ಬಬಿಯಾ ಮೊಸಳೆಯು ಹರಿಪಾದ ಸೇರಿ ಒಂದು ವರ್ಷ ಕಳೆದಿದ್ದು, ಆ ಬಳಿಕ ಇದೀಗ ತಿಂಗಳೊಳಗೆ ಮತ್ತೊಂದು ಮೊಸಳೆ ಆಗಮಿಸಿರುವುದು ಆಸ್ತಿಕ ಶ್ರದ್ಧಾಳುಗಳ ಭಕ್ತಿ ಪರಾಕಾಷ್ಟೆಗೆ ಕಾರಣವಾಗಿದೆ.
ಈ ಮಧ್ಯೆ ಕಳೆದ ಬುಧವಾರದ ನಂತರ ಅನಂತಪುರ ಕೊಳದಲ್ಲಿ ಮೊಸಳೆ ನೋಡಿರುವುದಾಗಿ ಕೆಲವು ಭಕ್ತರು ತಿಳಿಸಿದ್ದರು. ಶನಿವಾರ ದೇವಾಲಯದ ಅರ್ಚಕರು, ಆಡಳಿತ ಮಂಡಳಿ ಪದಾಧಿಕಾರಿಗಳು ಕಣ್ಣಾರೆ ಕಂಡು ಅದನ್ನು ದೃಢೀಕರಿಸಿದ್ದಾರೆ. ಈ ಮೂಲಕ ಭಕ್ತರ ಶ್ರದ್ಧೆ, ನಂಬಿಕೆಗಳು ಮತ್ತೊಮ್ಮೆ ಸಾಬೀತುಗೊಂಡಿವೆ.