ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶಿ ನಿರ್ಮಿತ ಬಾಂಬ್ ನುಂಗಿ ಹೆಣ್ಣು ಆನೆ ಮರಿ ಸಾವನ್ನಪ್ಪಿದೆ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಹುಲಿ ಅಭಯಾರಣ್ಯದಲ್ಲಿ ನಡೆದಿದೆ .
ಕೆಲವು ದಿನಗಳ ಹಿಂದೆ ಗುಥಿಯಾಲತ್ತೂರ್ ಮೀಸಲು ಅರಣ್ಯಕ್ಕೆ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ 2 ವರ್ಷದ ಆನೆ ಮರಿ ಸತ್ತಿರುವುದನ್ನು ಕಂಡು ಅರಣ್ಯ ಇಲಾಖೆಯ ಪಶುವೈದ್ಯರಿಗೆ ಮಾಹಿತಿ ನೀಡಿದರು.
ಆನೆ ಮರಿಯ ಸೊಂಡಿಲು ಮತ್ತು ಬಾಯಿಯಲ್ಲಿ ರಕ್ತಸ್ರಾವದ ಗಾಯಗಳು ಕಂಡುಬಂದಿತ್ತು. ಪಶುವೈದ್ಯರು ಶವಪರೀಕ್ಷೆ ನಡೆಸಿ ದೇಶಿ ನಿರ್ಮಿತ ಬಾಂಬ್ ಸೇವಿಸಿದ ನಂತರ ಆನೆ ಸಾವನ್ನಪ್ಪಿದೆ ಎಂದು ಘೋಷಿಸಿದ್ದಾರೆ.
ಕಾಡು ಹಂದಿಗಳು ಹೊಲಗಳಿಗೆ ಪ್ರವೇಶಿಸದಂತೆ ತಡೆಯಲು ರೈತರು ಆ ಬಾಂಬ್ ಅನ್ನು ಅಲ್ಲಿಗೆ ಎಸೆದಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತನೊಬ್ಬನನ್ನು ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ನಂತರ, ಅರಣ್ಯ ಪ್ರದೇಶದಲ್ಲಿ ಬಾಂಬ್ ಇಟ್ಟವರು ಯಾರು ಎಂಬುದನ್ನು ಕಂಡುಹಿಡಿಯಲು ಅರಣ್ಯ ಇಲಾಖೆ ತನಿಖೆ ಆರಂಭಿಸಿತು. ಹತ್ತಿರದ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳ ವಿವರವಾದ ಪರಿಶೀಲನೆಯಿಂದ ಈ ಕೃತ್ಯಕ್ಕೆ ಕಾರಣ ಯಾರು ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಿದ ನಂತರ, ಆ ಪ್ರದೇಶದ ರೈತ ಕಾಳಿಮುತ್ತು (43) ಎಂಬುವವರನ್ನು ಬಂಧಿಸಲಾಗಿದೆ. ಆನೆ ಮರಿಯ ಮೃತದೇಹವನ್ನು ಅದೇ ಪ್ರದೇಶದಲ್ಲಿ ಹೂಳಲಾಗಿದೆ.
ವಿಚಾರಣೆಯ ಸಮಯದಲ್ಲಿ, ಕಾಳಿಮುತ್ತು ಮತ್ತು ಇನ್ನೊಬ್ಬ ವ್ಯಕ್ತಿ ಕಾಡುಹಂದಿಗಳನ್ನು ಬೇಟೆಯಾಡಲು ದೇಶೀಯ ಬಾಂಬ್ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರೊಂದಿಗೆ ಅರಣ್ಯ ಅಧಿಕಾರಿಗಳು, ಪ್ರಸ್ತುತ ಪರಾರಿಯಾಗಿರುವ ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.


