ಹೊಸದಿಗಂತ ವರದಿ ತುಮಕೂರು:
ಅಪ್ರಾಪ್ತ ಮಗನಿಗೆ ವಾಹನ ಚಾಲನೆ ಮಾಡಲು ಕೊಟ್ಟಿದ್ದ ತಂದೆಗೆ ಗುಬ್ಬಿ ಜೆ.ಎಂ.ಎಫ್.ಸಿ. ನ್ಯಾಯಾಲಯ 30 ಸಾವಿರ ರುಪಾಯಿ ದಂಡ ಮತ್ತು ಒಂದು ದಿನ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಅಕ್ಟೋಬರ್ 31ರಂದು ಅಪ್ರಾಪ್ತ ಮಗನಿಗೆ ತಂದೆ ದ್ವಿಚಕ್ರ ವಾಹನ (ಕೆಎ-06, ಎಚ್. ಟಿ-3903) ಚಾಲನೆ ಮಾಡಲು ಕೊಟ್ಟಿದ್ದರು. ಆತ ತುಮಕೂರಿನಿಂದ ವಾಹನ ಚಾಲನೆ ಮಾಡಿಕೊಂಡು ಬರುವಾಗ ರಾತ್ರಿ ಗುಬ್ಬಿ ಬೈಪಾಸ್ ನ ಸಿಐಟಿ ಕಾಲೇಜು ಹಿಂಭಾಗ ರಸ್ತೆ ಪಕ್ಕದಲ್ಲಿದ್ದ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದಿದ್ದ.
ಈ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಅಪ್ರಾಪ್ತ ಮಗನಿಗೆ ಬೈಕೊಟ್ಟ ತಂದೆಗೆ ಒಂದು ದಿನ ಜೈಲು ಶಿಕ್ಷೆ, 30 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡುವ ಪೋಷಕರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.