ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇಷ್ಟು ದಿನ ಬರಬಿಸಿಲಿನಿಂದಾಗಿ ರೈತರು ಹೈರಾಣಾಗಿದ್ದರು. ಇದೀಗ ಮಳೆ ಆರಂಭವಾಗಿದ್ದು, ರೈತನ ಮೊಗದಲ್ಲಿ ಸಂತಸ ಕಾಣಿಸಿದೆ. ಆದರೆ ಸರ್ಕಾರದಿಂದ ಅನ್ನದಾತನಿಗೆ ಕಹಿ ಸುದ್ದಿ ಸಿಕ್ಕಿದ್ದು, ಬಿತ್ತನೆ ಬೀಜಗಳ ಬೆಲೆ ಶೇ.48 ಏರಿಕೆಯಾಗಿದೆ.
ಬರಗಾಲದಿಂದ ಬೀಜೋತ್ಪಾದನೆ ಕುಂಠಿತವಾದ ಕಾರಣ ದರ ಹೆಚ್ಚಳವಾಗಿದೆ. ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸವು 2023 ಕ್ಕೆ ಹೋಲಿಸಿದರೆ ಈ ಬಾರಿ ಗರಿಷ್ಠ ಶೇ.48.50 ರಷ್ಟಿದೆ. ದರ ಹೆಚ್ಚಳದಿಂದಾಗಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
ಆದಾಗ್ಯೂ ನೆರೆಯ ರಾಜ್ಯಗಳ ಹೋಲಿಕೆಯಲ್ಲಿ ಬಿತ್ತನೆ ಬೀಜಗಳ ದರ ರಾಜ್ಯದಲ್ಲಿ ಕಡಿಮೆಯಿದೆ ಎಂದು ಸಿಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃಷಿ ಸಚಿವರು, ಇದು ನಮ್ಮ ವ್ಯಾಪ್ತಿಗೆ ಬರಲ್ಲ. ಆಹಾರ ಧಾನ್ಯಗಳ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆ ಕಾರ್ಯ ಮಾಡಲು ಸಜ್ಜಾಗುತ್ತಿದ್ದಾರೆ. ಆದರೆ ಸರ್ಕಾರ ರಾಜ್ಯದ ರೈತರಿಗೆ ಶಾಕ್ ನೀಡಿದೆ. ಬಿತ್ತನೆ ಬೀಜಗಳ ದರಗಳನ್ನು ಜಾಸ್ತಿ ಮಾಡಲಾಗಿದೆ. ಹೆಸರು 805 ರೂ, ಉದ್ದು 660, ತೊಗರಿ 776, ಸೋಯಾಬಿನ್ 1,431 ರೂ. ಇದ್ದು, ಕಳೆದ ಬಾರಿಗಿಂತ ಈ ಬಾರಿ 20-30 ಪರ್ಸೆಂಟ್ ದರ ಹೆಚ್ಚಳ ಮಾಡಲಾಗಿದೆ. ಸರ್ಕಾರದ ವಿರುದ್ಧ ಧಾರವಾಡ ಜಿಲ್ಲಾ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.